ಯುವ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳ್ ಅಪಘಾತದಲ್ಲಿ ಸಾವು

ಯುವ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳ್ ಅಪಘಾತದಲ್ಲಿ ಸಾವು

ಶಿಲಾಂಗ್: ತಮಿಳುನಾಡು ಮೂಲದ ಯುವ ಟೇಬಲ್ ಟೆನಿಸ್ ಆಟಗಾರ ವಿಶ್ವ ದೀನದಯಾಳನ್ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಗುವಾಹಟಿಯಿಂದ ಶಿಲಾಂಗ್​ಗೆ ಟ್ಯಾಕ್ಸಿ ಮೂಲಕ ತೆರಳುವ ವೇಲೆ ಅಪಘಾತ ಸಂಭವಿಸಿದೆ. ಅವರು ತಮ್ಮ ಮೂವರು ಸಹ ಆಟಗಾರರೊಂದಿಗೆ ಸೋಮವಾರದಿಂದ ಆರಂಭವಾಗಬೇಕಿದ್ದ 83ನೇ ಸೀನಿಯರ್ ನ್ಯಾಷನಲ್​ ಅಂಡ್​ ಇಂಟರ್​ ಸ್ಟೇಟ್​ ಟೇಬಲ್ ಟೆನ್ನಿಸ್‌​ ಚಾಂಪಿಯನ್​ಶಿಪ್​ನಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ರಮೇಶ್​ ಸಂತೋಷ್​ ಕುಮಾರ್, ಅಭಿನಾಶ್ ಪ್ರಸನ್ನಾಜಿ ಶ್ರೀನಿವಾಸನ್​ ಮತ್ತು ಕಿಶೋರ್ ಕುಮಾರ್​ ಎಂಬುವವರು ವಿಶ್ವ ದೀನದಯಾಳನ್​ ಜೊತೆಗೆ ಪ್ರಯಾಣಿಸುತ್ತಿದ್ದ ಆಟಗಾರರಾಗಿದ್ದಾರೆ. ಪ್ರಯಾಣ ನಡೆಸುತ್ತಿದ್ದ ಸಂದರ್ಭದಲ್ಲಿ ಮುಂಭಾಗದಿಂದ ಬಂದ 12 ಚಕ್ರಗಳ ಟ್ರೇಲರ್, ರಸ್ತೆ ವಿಭಜಕ್ಕೆ ಗುದ್ದಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಟ್ಯಾಕ್ಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಶ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ರಮೇಶ್ ಸಂತೋಷ್ ಕುಮಾರ್, ಅವಿನಾಶ್ ಪ್ರಸನ್ನಜಿ ಮತ್ತು ಕಿಶೋರ್ ಕುಮಾರ್ ಗಂಭೀರ ಗಾಯಗೊಂಡಿದ್ದಾರೆ ಎಂದು ಭಾರತ ಟೇಬಲ್ ಟೆನಿಸ್ ಫೆಡರೇಷನ್ ತಿಳಿಸಿದೆ.