ಪ್ರಾಕೃತಿಕ ವಿಕೋಪ ಹಾನಿ ತಡೆಯಲು ಸನ್ನದ್ಧರಾಗಿ: ಸಿಎಂ ಯಡಿಯೂರಪ್ಪ
24x7liveKannada
Mar 15, 2023 22:38
ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಮುಂಗಾರು ಆರಂಭವಾಗಿದ್ದು, ಆ ದಿಸೆಯಲ್ಲಿ ಭೂ ಕುಸಿತ ಹಾಗೂ ಪ್ರವಾಹ ಎದುರಿಸಲು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿರ್ದೇಶನ ನೀಡಿದ್ದಾರೆ.
ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಡಿಯೊ ಸಂವಾದ ಮೂಲಕ ಮಾಹಿತಿ ಪಡೆದು ಅವರು ಮಾತನಾಡಿದರು.
ರಾಜ್ಯದ ಕೆಲವು ಜಿಲ್ಲೆಗಳು ಕಳೆದ ಮೂರು ವರ್ಷಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ, ಸಂಕಷ್ಟ ಎದುರಿಸುತ್ತಿವೆ. ಆದ್ದರಿಂದ ಇಂತಹ ಹಾನಿಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದರು.
ಈಗಾಗಲೇ ನಾಲ್ಕು ಜಿಲ್ಲೆಗಳಿಗೆ ಎನ್ಡಿಆರ್ಎಫ್ ತಂಡಗಳನ್ನು ಕಳುಹಿಸಲಾಗಿದೆ. ಪ್ರಾಕೃತಿಕ ವಿಕೋಪ ಎದುರಿಸಲು ಎಲ್ಲಾ ರೀತಿಯ ಸನ್ನದ್ದು ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿರ್ದೇಶನ ನೀಡಿದರು.
ಅಗತ್ಯವಿರುವೆಡೆ ಪರಿಹಾರ ಕೇಂದ್ರಗಳನ್ನು ತೆರೆದು ಸ್ಥಳಾಂತರಿಸುವುದು. ವೈದ್ಯಕೀಯ ಸವಲತ್ತು ಕಲ್ಪಿಸುವುದು, ಸಂಪನ್ಮೂಲಗಳನ್ನು ಕ್ರೋಢೀಕರಣ ಮಾಡಿಕೊಳ್ಳುವುದು ಮತ್ತಿತರ ಅಗತ್ಯ ತಯಾರಿ ಇರಬೇಕು. ಯಾವುದೇ ರೀತಿಯ ಹಾನಿ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ ಎಂದು ಮುಖ್ಯಮಂತ್ರಿ ಅವರು ಒತ್ತಿ ಹೇಳಿದರು.
ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಮನೆ ಹಾನಿಯಾದಲ್ಲಿ 5 ಲಕ್ಷ ರೂ, ಭಾಗಶಃ ಮನೆ ಹಾನಿಯಾದಲ್ಲಿ 2 ಲಕ್ಷ ರೂ. ಹೀಗೆ ಹಂತ ಹಂತವಾಗಿ ಹಣ ಒದಗಿಸಲಾಗುವುದು. ಹಿಂದೆ ಯಾವ ಮಾನದಂಡ ಇತ್ತು ಅದರಂತೆ ಹಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ ಪ್ರವಾಹ ಹಾಗೂ ಭೂ ಕುಸಿತ ಪ್ರದೇಶಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಹಣಕಾಸಿನ ತೊಂದರೆಯಿಲ್ಲ. ಆದರೆ, ಇರುವ ಹಣವನ್ನು ಬಳಸಬೇಕು. ಮುಂದೆ ಮತ್ತಷ್ಟು ಹಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಅವರು ಪ್ರಕಟಿಸಿದರು.