BUSINESS:
ಬೆಂಗಳೂರು: ನವೋದ್ಯಮ ಕ್ಷೇತ್ರದಲ್ಲಿ ಪರಸ್ಪರ ಮಾರುಕಟ್ಟೆ ವಿಸ್ತರಣೆ ಮತ್ತು ಬಲವರ್ಧನೆಯ ಗುರಿಯೊಂದಿಗೆ ಕರ್ನಾಟಕ ಮತ್ತು ಜರ್ಮನಿಯ ಬರ್ಲಿನ್ ಪ್ರಾಂತ್ಯಗಳು ಒಡಂಬಡಿಕೆಗೆ ಸಹಿ ಹಾಕಿವೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಬೆಂಗಳೂರು ಮತ್ತು ಬರ್ಲಿನ್ ನಗರಗಳೆರಡೂ ನವೋದ್ಯಮಗಳ ಪಾಲಿಗೆ ಅಚ್ಚುಮೆಚ್ಚಿನ ತಾಣಗಳಾಗಿವೆ. ಈ ಒಡಂಬಡಿಕೆಯು ಮುಖ್ಯವಾಗಿ ಕೃತಕ ಬುದ್ಧಿಮತ್ತೆ, ಸ್ಮಾರ್ಟ್ ಸಿಟಿ ಅಭಿವೃದ್ಧಿ ಮತ್ತು ಮಹಿಳಾ ಉದ್ಯಮಿಗಳಿಗೆ ನೆರವು ನೀಡಲಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯ ಐಟಿ- ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಜರ್ಮನಿಯಲ್ಲಿನ ಭಾರತೀಯ ರಾಯಭಾರಿ ಹರೀಶ್ ಪರ್ವತನೇನಿ, ಬರ್ಲಿನ್ ಪ್ರಾಂತ್ಯದ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಮೈಕೇಲ್ ಬೀಲ್ ಮತ್ತು ಬೆಂಗಳೂರಿನಲ್ಲಿ ಇರುವ ಜರ್ಮನಿಯ ಉಪ ಕಾನ್ಸುಲ್ ಜನರಲ್ ಫ್ರೆಡರಿಕ್ ಬರ್ಗಿಲಿನ್ ಇದ್ದರು.