BUSINESS:
ರಾಮನಗರ : ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಅಮಾಯಕ ರೈತನ ಮೇಲೆ ನಡೆದಿರುವ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಘಟನೆ ಸಂಬಂಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊರತುಪಡಿಸಿ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ತುಟಿ ಪಿಟಿಕ್ ಎನ್ನದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ರೇಷ್ಮೆಗೂಡಿನ ಮಾರುಕಟ್ಟೆಯ ಹೊರ ಭಾಗದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ನಿಂದ ಮೊದಲುಗೊಂಡು ಇಡೀ ಮಾರುಕಟ್ಟೆ ಆವರಣದಲ್ಲಿ ರೈತರ ಶೋಷಣೆ ಎಗ್ಗಿಲ್ಲದೆ ನಡೆಯುತ್ತಿದೆ. ಕೆಲವೊಮ್ಮೆ ಇದೇನು ಸರ್ಕಾರಿ ಮಾರುಕಟ್ಟೆಯೋ ಅಥವಾ ಖಾಸಗಿಯವರ ಅಂಧಾ ದರ್ಬಾರೋ ಎನ್ನುವ ಅನುಮಾನ ಮೂಡುವಂತಾಗುತ್ತದೆ.
ಕಾಡುತ್ತಿದೆ ಅಭದ್ರತೆ
ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಗೆ ರಾಮನಗರ ಮಾತ್ರವಲ್ಲದೆ ನೆರೆಯ ಮಂಡ್ಯ, ಚಾಮರಾಜನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಗೂಡು ಮಾರಾಟಕ್ಕೆ ಬರುತ್ತಾರೆ. ಮಾರುಕಟ್ಟೆಯಲ್ಲಿ ರೈತರಿಗೆ ಅಭದ್ರತೆ ಕಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.
ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರ ಹಿತವನ್ನು ಬದಿಗಿರಿಸಿ, ಯಾವಾಗಲೂ ರೀಲರ್‌ಗಳ ಪರವಾಗಿ ನಿಲ್ಲುತ್ತಾರೆ. ಸ್ವತಃ ಸಿಬ್ಬಂದಿಯೇ ದಲ್ಲಾಳಿಗಳಂತೆ ವರ್ತಿಸಿದ ಅದೆಷ್ಟೋ ನಿದರ್ಶನಗಳಿವೆ. ಇದೆಲ್ಲವನ್ನೂ ಗಮನಿಸಿದರೆ, ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಬಂಡವಾಳಶಾಹಿ ವ್ಯವಸ್ಥೆ ಮನೆ ಮಾಡಿದೆ.
ಮೂಲ ಸೌಲಭ್ಯಗಳಿಲ್ಲ
ರೈತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ವಿಚಾರದಲ್ಲೂ ಅಧಿಕಾರಿಗಳು ವಿಫಲರಾಗಿದ್ದಾರೆ. ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರು ಮತ್ತು ಸರ್ಕಾರದ ಭರವಸೆಗಳ್ಯಾವೂ ಈಡೇರಿಲ್ಲ. ಸಿಸಿ ಕ್ಯಾಮೆರಾ ಕಣ್ಗಾವಲು ಇದೆಯಾದರೂ ಅದರ ನಿರ್ವಹಣೆಯಲ್ಲಿ ಸಿಬ್ಬಂದಿ ಸೋತಿದ್ದಾರೆ.
120 ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಿರುವ ಮಾರುಕಟ್ಟೆಯಲ್ಲಿ ಪ್ರಸ್ತುತ ಇರುವುದು ಬೆರಳೆಣಿಕೆ ಸಿಬ್ಬಂದಿ ಮಾತ್ರವೇ. ಮಾರುಕಟ್ಟೆಯ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದನ್ನೇನಾದರೂ ಖಾಸಗಿ ಪಾಲು ಮಾಡುವ ಹುನ್ನಾರ ನಡೆದಿರಬಹುದೇ ಎನ್ನುವ ಸಂಶಯ ಸಹಜವಾಗಿಯೇ ಮೂಡುತ್ತದೆ.
ಭೇಟಿ ನೀಡುವುದಿಲ್ಲ
ರೇಷ್ಮೆ ಸಚಿವರು, ಸ್ಥಳೀಯ ಶಾಸಕರು, ಸಂಸದರು, ಉನ್ನತ ಅಧಿಕಾರಿಗಳು ಆಗಿಂದಾಗ್ಗೆ ಮಾರುಕಟ್ಟೆಗೆ ಭೇಟಿ ನೀಡುವ ಪರಿಪಾಠ ಹಾಕಿಕೊಂಡಿದ್ದರೆ ಖಂಡಿತವಾಗಿಯೂ ಇಷ್ಟೊಂದು ಅದ್ವಾನಗಳಿಗೆ ಆಸ್ಪದವಿರುತ್ತಿರಲಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಅಸಡ್ಡೆ, ಬೇಜವಬ್ದಾರಿತನದ ಪ್ರತೀಕವೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಹೇಳೋರು, ಕೇಳೋರು ಇಲ್ಲದಂತಹ ವ್ಯವಸ್ಥೆಯಲ್ಲಿ ರೈತರಿಗೆ ನ್ಯಾಯ ಮರೀಚಿಕೆಯಾಗಿದೆ.
ರೀಲರ್, ದಲ್ಲಾಳಿ, ಸಿಬ್ಬಂದಿಯ ಆಟಾಟೋಪಕ್ಕೆ ರೈತರು ನಲುಗಿದ್ದಾರೆ. ಮಾರುಕಟ್ಟೆಗೆ ಹೈಟೆಕ್ ಸ್ಪರ್ಶ ನೀಡುವ ಪ್ರಯತ್ನವಾಗಿದೆಯೇ ಹೊರತು ರೈತರಿಗೆ ಭದ್ರತೆ, ಸೌಲಭ್ಯ, ನ್ಯಾಯ ಒದಗಿಸುವ ಪ್ರಾಮಾಣಿಕ ಕೆಲಸ ಆಗಿಲ್ಲವೆನ್ನುವ ಆರೋಪವಿದೆ.
ಯಾರೂ ಸೊಲ್ಲೆತ್ತಿಲ್ಲ
ರೇಷ್ಮೆಗೂಡು ದೋಚುವ ದಗಲ್ಬಾಜಿಗಳು, ಕಿಸೆಗಳ್ಳರ ಹಾವಳಿಗೆ ಕೊನೆಯೇ ಇಲ್ಲ. ರೈತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಿರಂತರವಾಗಿ ಮುಂದುವರೆದಿದೆ. ಕಡಿಮೆ ಬೆಲೆಗೆ ಗೂಡು ವ್ಯಾಪಾರ ಗಿಟ್ಟಿಸಲು ಚೌಕಾಶಿ ವ್ಯವಹಾರ ಸೇರಿದಂತೆ ಅನೇಕ ಪ್ರಕರಣಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದರೂ ಕೇಳೋರಿಲ್ಲ. ಇದೀಗ ರೈತನ ಮೇಲೆ ರೀಲರ್ ನಡೆಸಿರುವ ದೌರ್ಜನ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗಿದೆ. ಸಾರ್ವಜನಿಕ ವಲಯದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ.
ಸಭೆ ಕರೆಯಲು ಆಗ್ರಹ
ರೇಷ್ಮೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳನ್ನೊಳಗೊಂಡ ಸಭೆ ಕರೆಯಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಈ ಸಭೆಗೆ ರೈತ ಸಂಘ ಹಾಗೂ ರೇಷ್ಮೆ ಬೆಳೆಗಾರರ ಸಂಘಟನೆಯ ಪದಾಧಿಕಾರಿಗಳನ್ನೂ ಆಹ್ವಾನಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ. ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರೈತನ ಮೇಲೆ ನಡೆದಿರುವ ದೌರ್ಜನ್ಯದ ವಿಷಯದಲ್ಲಿ ಸರ್ಕಾರದ ನಡೆ ಬಗ್ಗೆ ಅನುಮಾನವಿದೆ.
ಇಂತಹ ಘಟನೆ ಮರುಕಳಿಸದಂತೆ ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ರೈತ ಮುಖಂಡರಾದ ಸಿ.ಪುಟ್ಟಸ್ವಾಮಿ, ನಂಜಪ್ಪ, ಧರಣೀಶ್ ರಾಂಪುರ, ಪ್ರಕಾಶ್ ಬೈರಾಪಟ್ಟಣ, ಆರ್.ರಾಜಶೇಖರ್, ಸತೀಶ್ ಮಾಕಳಿ, ಶಿವಕುಮಾರ್ ಮತ್ತಿತರರು ಆಗ್ರಹಿಸಿದ್ದಾರೆ.