BUSINESS:
ವಿಶೇಷ ವರದಿ : ಜಿ ಹರೀಶಕುಮಾರ್
ಶಿವಮೊಗ್ಗ ತಾಲೂಕಿನ ಸೋಗಾನೆ ಸಮೀಪ ನಿರ್ಮಾಣ ಮಾಡಲಾಗುತ್ತಿರುವ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ವಿನ್ಯಾಸ ಈಗ ವಿವಾದದ ಕೇಂದ್ರಬಿಂದುವಾಗಿದೆ. ಸಿಎಂ ಯಡಿಯೂರಪ್ಪ ಈಗಾಗಲೇ ವಿನ್ಯಾಸ ಬಿಡುಗಡೆ ಮಾಡಿದ್ದು, ಇದು ಚರ್ಚೆಗೆ ಎಡೆಮಾಡಿಕೊಟ್ಟಿದೆ. 2022ರ ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಿಎಂ ಅವರೇ ಹೇಳಿದ್ದಾರೆ. ಆದರೆ, ಟರ್ಮಿನಲ್ ವಿನ್ಯಾಸ ಬಿಜೆಪಿ ಚಿಹ್ನೆಯಾಗಿರುವ ಕಮಲದ ಮಾದರಿಯಲ್ಲಿರುವುದಕ್ಕೆ ಕಾಂಗ್ರೆಸ್ ತಕರಾರೆತ್ತಿದೆ. ಅದನ್ನು ಬದಲಿಸಬೇಕೆಂದೂ ಅದು ಒತ್ತಾಯಿಸಿದೆ. ಬಿಜೆಪಿ ನಾಯಕರು ಇದನ್ನು ತಳ್ಳಿಹಾಕಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕೆಂಬ ಬಹುವರ್ಷಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗುತ್ತಿದೆ. ಕಾಮಗಾರಿಯೂ ವೇಗವಾಗಿ ಸಾಗುತ್ತಿದೆ. ಒಂದಿಲ್ಲೊಂದು ಅಡ್ಡಿ, ಆತಂಕಗಳು ಬಂದರೂ ರೈತರ ಮನವೊಲಿಸಿ ಭೂ ಸ್ವಾಧೀನಪಡಿಸಿಕೊಂಡು ಕೊನೆಗೂ ಜನರ ಸೇವೆಗೆ ಸಮರ್ಪಣೆಯಾಗುವ ದಿನಗಳು ಹತ್ತಿರವಾಗುತ್ತಿವೆ. ಇನ್ನೊಂದು ವರ್ಷದೊಳಗೆ ಕಾಮಗಾರಿ ಮುಗಿಯುವ ವಿಶ್ವಾಸವನ್ನು ಯಡಿಯೂರಪ್ಪ ಅವರೇ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೇರಿದಂತೆ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಆದಷ್ಟು ಬೇಗ ಪೂರ್ಣ ಮಾಡಿ ಎಂದು ಸೂಚನೆ ನೀಡಿದ್ದಾರೆ. ಕಾಮಗಾರಿಯೂ ವೇಗ ಪಡೆದುಕೊಂಡಿದೆ.
ವಿಮಾನ ನಿಲ್ದಾಣಕ್ಕೆಷ್ಟು ಖರ್ಚಾಗಿದೆ…?
ನಿಲ್ದಾಣ ನಿರ್ಮಾಣಕ್ಕೆ ಒಟ್ಟು 384 ಕೋಟಿ ರೂಪಾಯಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 220 ಕೋಟಿ ಹಾಗೂ ಎರಡನೇ ಹಂತದಲ್ಲಿ 180 ಕೋಟಿ ರೂಪಾಯಿ ನೀಡಲಾಗಿದೆ. ಪ್ಯಾಸೆಂಜರ್ ಟರ್ಮಿನಲ್ ಕಟ್ಟಡ, ಎಟಿಸಿ ಟವರ್ ಕಟ್ಟಡ, ಎಲೆಕ್ಟಿಕಲ್ ಸಬ್ ಸ್ಟೇಷನ್, ಟೈರ್ ಸ್ಟೇಷನ್, ಮೇಲ್ಮಟ್ಟದ ನೀರಿನ ತೊಟ್ಟಿ, ವಾಚ್ ಟವರ್, ಪಂಪ್‌ಹೌಸ್, ನೆಲಮಟ್ಟದಲ್ಲಿ ನೀರಿನ ತೊಟ್ಟಿ, ಕೂಲಿಂಗ್ ಪಿಟ್ ಒಳಗೊಂಡ ಕಾಮಗಾರಿಗೆ ಕರಾರು ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿ ಆರಂಭಿಸಬೇಕಿದೆ ಅಷ್ಟೇ.
ರನ್ ವೇ ಕಾಮಗಾರಿ, ಸಂಪರ್ಕ ರಸ್ತೆ, ಪೆರಿಮೀಟರ್ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದ್ದರೆ, ಕಾಂಪೌಂಡ್ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, 15,900 ಮೀಟರ್ ಪೈಕಿ 11500 ಮೀಟರ್ ಕಾಂಪೌಡ್ ನಿರ್ಮಾಣ ಪೂರ್ಣಗೊಳಿಸಲಾಗಿದೆ.
ವಿವಾದದ ಕಿಡಿ ಹೊತ್ತಿದ್ದಾದರೂ ಯಾಕೆ…?
ಇನ್ನು ಯಡಿಯೂರಪ್ಪ ಅವರು ಸೋಗಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಟರ್ಮಿನಲ್ ಕಟ್ಟಡದ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ವಿನ್ಯಾಸದ ವಿಡಿಯೋ ನೋಡುತ್ತಿದ್ದಂತೆ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಸರ್ಕಾರದ ಹಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದ್ದರೂ, ವಿನ್ಯಾಸವು ಬಿಜೆಪಿ ಪಕ್ಷದ ಚಿಹ್ನೆ ಕಮಲ ಹೋಲುವಂತಿದೆ. ಇದೇ ಈಗ ವಿವಾದ ಕಿಡಿ ಹೊತ್ತಿಸಿರುವ ಅಂಶ.
ಕಾಂಗ್ರೆಸ್ ಹೇಳೋದೇನು…?
ನಿಲ್ದಾಣ ಆಗುತ್ತಿರುವುದಕ್ಕೆ ನಮ್ಮ ವಿರೋಧ ಇಲ್ಲ. ಇಲ್ಲಿಯೂ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಕಮಲ ಚಿಹ್ನೆ ಹೋಲುವಂತೆ ವಿನ್ಯಾಸ ರೂಪಿಸಿರುವುದರ ಹಿಂದಿನ ಅಸಲಿಯತ್ತೇನು. ಯಾರೇ ಈ ವಿನ್ಯಾಸ ನೋಡಿದರೂ ಇದು ಬಿಜೆಪಿಯದ್ದು ಎಂಬ ಭಾವನೆ ಮೂಡುವಂತಿದೆ. ಬಿಜೆಪಿ ಕಮಲ ಚಿಹ್ನೆ ಎಂಬುದಾಗಿ ಟರ್ಮಿನಲ್ ಕಟ್ಟಡದ ವಿಡಿಯೋ ನೋಡಿದವರು ಹೇಳುತ್ತಾರೆ. ಇದರ ಹಿಂದೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಇದನ್ನು ಬಳಕೆ ಮಾಡಿಕೊಳ್ಳಲು ಈಗಲೇ ಯತ್ನಿಸುತ್ತಿದೆ ಎಂಬುದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಎಸ್. ಸುಂದರೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಆರೋಪ.
ಬಿಜೆಪಿಯವರು ಇದಕ್ಕೆ ಏನಂತಾರೆ..?
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ, ನಾವೇನೂ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಪಕ್ಷ ಬಳಕೆ ಮಾಡಿಲ್ಲ. ಚಿಹ್ನೆಯನ್ನೂ ಹೋಲುವಂತೆ ವಿನ್ಯಾಸ ರೂಪಿಸಿ ಎಂದು ಯಾರಿಗೂ ಹೇಳಿಲ್ಲ. ತುಂಬಾ ಚೆನ್ನಾಗಿ ಟರ್ಮಿನಲ್ ನಿರ್ಮಾಣದ ವಿಡಿಯೋ ನೋಡಿ ಕಾಂಗ್ರೆಸ್ಸಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಬೇರೆ ಬೇರೆ ಕಡೆಗಳಲ್ಲಿಯೂ ಬಿಜೆಪಿ ಚಿಹ್ನೆ ಹೋಲುವಂಥ ಕಟ್ಟಡಗಳಿವೆ. ಹಾಗೆಂದ ಮಾತ್ರಕ್ಕೆ ಧರೆಗುರುಳಿಸಲು ಆಗುತ್ತಾ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಒಟ್ಟಿನಲ್ಲಿ ಟರ್ಮಿನಲ್ ಕಟ್ಟಡದ ವಿನ್ಯಾಸ ಈಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಸಮರಕ್ಕೂ ಕಾರಣವಾಗಿದೆ. ವಾಕ್ಸಮರವೂ ಜೋರಾಗಿದೆ. ವಿನ್ಯಾಸ ಬದಲಿಸಲೇಬೇಕೆಂಬ ಪಟ್ಟು ಕೈ ಪಡೆಯದ್ದಾದರೆ, ಚೆನ್ನಾಗಿರುವ, ಎಲ್ಲರೂ ಮೆಚ್ಚಿಕೊಂಡಿರುವ ವಿನ್ಯಾಸ ಯಾಕೆ ಬದಲಿಸಬೇಕು ಎಂಬುದು ಬಿಜೆಪಿಯವರ ಪ್ರಶ್ನೆ. ಮುಂಬರುವ ದಿನಗಳಲ್ಲಿ ಈ ವಿಚಾರ ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ.