DISTRICT:
ಸಕಲೇಶಪುರ : ಬ್ರಿಟೀಷರ ಕಾಲದ ಪುರಾತನ ಬೆಳ್ಳಿ ನಾಣ್ಯಗಳನ್ನು ಹಾಸನ ಜಿಲ್ಲೆಯ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಹಾಲೇಬೇಲೂರು ಗ್ರಾಮದ ಶ್ಯಾಮ್ ಎಂಬುವರ ಕಾಫಿ ತೋಟದಲ್ಲಿ ವಾಟೆಗದ್ದೆ ಗ್ರಾಮದ ಹರೀಶ್ ಹಾಗೂ ಇತರರು ಕೆಲಸ ಮಾಡುವಾಗ ಬ್ರಿಟೀಷರ ಕಾಲದ ಕೆಲ ನಾಣ್ಯಗಳು ದೊರಕಿದ್ದು ಮಾಲಿಕರಿಗೆ ತಿಳಿಸದೆ ಮನೆಗೆ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಕೆಲಸಗಾರರಿಗೆ ನಿಧಿ ಸಿಕ್ಕಿದೆ ಎಂದು ಗ್ರಾಮದಲ್ಲಿ ಸುದ್ದಿ ಹರಡಿದೆ. ಆಗ ವಿಷಯ ಗೊತ್ತಾಗಿ ಕಾಫಿ ತೋಟದ ಮಾಲೀಕರು ಹರೀಶ್ ಬಳಿ ಈ ಬಗ್ಗೆ ವಿಚಾರಿಸಿದ್ದಾರೆ.
ಆಗ ಆತ ತನಗೆ ಬೆಳ್ಳಿಯಂತಿರುವ ಕೇವಲ 9 ನಾಣ್ಯ ಸಿಕ್ಕಿದೆ ಎಂದು ಹೇಳಿ ಮಾಲಿಕರಿಗೆ 9 ನಾಣ್ಯ ತಂದು ಕೊಟ್ಟಿದ್ದಾನೆ. ತೋಟದ ಮಾಲೀಕ ಶ್ಯಾಮ್ ಈ ಬಗ್ಗೆ ಪೋಲಿಸರಿಗೆ ದೂರು ನೀಡಿ 9 ನಾಣ್ಯಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಗ್ರಾಮಾಂತರ ಠಾಣೆಯ ಪಿಎಸ್‌ಐ ಬಸವರಾಜ, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹರೀಶನನ್ನು ವಿಚಾರಿಸಿದ್ದಾರೆ. ಆಗ, ವಾಟೆಗದ್ದೆ ಗ್ರಾಮದ ಅವನ ಮನೆಯ ಹಿಂಭಾಗ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಸುಮಾರು 19 ಬ್ರಿಟೀಷರ ಕಾಲದ ಬೆಳ್ಳಿ ನಾಣ್ಯಗಳು ಸಿಕ್ಕಿವೆ.
ಒಟ್ಟು 28 ಬೆಳ್ಳಿ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಲಕ್ಷಾಂತರ ಬೆಲೆ ಬಾಳುತ್ತವೆ ಎನ್ನಲಾಗಿದೆ, ಡಿ.ವೈ.ಎಸ್.ಪಿ ಅನಿಲ್ ಕುಮಾರ್, ಗ್ರಾಮಾಂತರ ಠಾಣೆ ಪಿಎಸ್‌ಐ ಬಸವರಾಜು ಮಾರ್ಗದರ್ಶನದಲ್ಲಿ ತನಿಖೆ ನಡೆಸಲಾಗುತ್ತಿದೆ.