DISTRICT:
ಧಾರವಾಡ: ಅಗಸ್ಟ್ 15, ಜನೆವರಿ 26 ಬಂದ್ರೆ ಸಾಕು ಎಲ್ಲಿ ನೋಡಿದರೂ ರಾಷ್ಟ್ರ ಧ್ವಜದ ಕಲರವ ಜೋರಾಗಿರುತ್ತಿದೆ. ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರತಿಯೊಬ್ಬರ ಕೈಯಲ್ಲಿ ಅಂದೊಂದಿನ ರಾಷ್ಟ್ರ ಧ್ವಜಗಳು ರಾರಾಜಿಸುತ್ತವೆ. ಆದರೆ ಅದರಲ್ಲಿ ಬಹುತೇಕ ಪ್ಲ್ಯಾಗ್‌ಗಳು ಪರಿಸರ ವಿರೋಧಿ ಧ್ವಜಗಳಾಗಿರುತ್ತವೆ. ಪ್ಲಾಸ್ಟಿಕ್ ಧ್ವಜವನ್ನು ಕೆಲವರು ಎಲ್ಲೆಂದರಲ್ಲಿ ಬಿಟ್ಟು ಹೋಗುವುದರಿಂದ ದೇಶದ ಧ್ವಜಕ್ಕೆ ಅಪಮಾನ ಆಗುವುದನ್ನು ಹಲವು ಕಡೆಗಳಲ್ಲಿ ಕಂಡು ಬರುತ್ತಿದ್ದು, ಇದೆಲ್ಲವನ್ನು ತಪ್ಪಿಸುವ ದೃಷ್ಠಿಯಿಂದ ಪೇಢಾ ನಗರಿ ಧಾರವಾಡದ ದಂಪತಿಗಳು ಪರಿಸರ ಸ್ನೇಹಿ ಸೀಡ್ ಪೇಪರ್ ಧ್ವಜ ತಯಾರಿಸುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸೀಡ್ ಪೇಪರ್ ಧ್ವಜದಲ್ಲಿ ತುಳಸಿ, ಜಾಸ್ಮಿನ್, ಟೊಮೆಟೋ ಬೀಜ್:
ಧಾರವಾಡ ನಗರದ ಕೆ.ಸಿ.ಪಾರ್ಕ್‌ನ ನಿವಾಸಿಗಳಾದ ಅಕ್ಷತಾ ಭದ್ರಣ್ಣ ಹಾಗೂ ರಾಹುಲ್ ಪಾಗಾದ್ ದಂಪತಿ ತಯಾರಿಸಿರುವ ಸೀಡ್ ಪೇಪರ್ ಧ್ವಜ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರದ್ದಿ ಪೇಪರ್ ಹಾಗೂ ಹಳೇ ಬಟ್ಟೆಗಳನ್ನು ಪುನರ್‌ಬಳಸಿ ಅದರೊಳಗೆ ತುಳಸಿ, ಜಾಸ್ಮಿನ್, ಟೊಮೆಟೋ ಬೀಜಗಳನ್ನು ಇಟ್ಟು ಧ್ವಜ ತಯಾರಿಸಿದ್ದಾರೆ. ಈ ಧ್ವಜವನ್ನು ಬಳಸಿ ಅವುಗಳನ್ನ ಮನೆಯಂಗಳದ ಕೈ ತೋಟದಲ್ಲಾಗಲಿ, ಕುಂಡದಲ್ಲಾಗಲಿ ಮಣ್ಣಿನ ಜೊತೆ ಸೇರಿಸಿ, ನೀರೆರೆದರೆ ಕೆಲವೇ ದಿನಗಳಲ್ಲಿ ಅದರಲ್ಲಿ ಅಡಗಿರೋ ಬೀಜಗಳು ಸಸಿಗಳಾಗಿ ಮೇಲೇಳತ್ತವೆ.
ಅವಳಿನಗರದ ಜನತೆ ಮೆಚ್ಚುಗೆ ಪಡೆದ ಸೀಡ್ ಪೇಪರ್ ಧ್ವಜ:
ಇನ್ನೂ ಈ ಸೀಡ್ ಪೇಪರ್ ಧ್ವಜವನ್ನು ಡ್ರೆಸ್ ಮೇಲೆ ಇಟ್ಟುಕೊಂಡು ಪಿನ್ ಹಾಕಿಕೊಂಡರೆ ದೇಶ ಪ್ರೇಮದ ಹೆಮ್ಮೆ, ಅದನ್ನು ಮಣ್ಣಿಗೆ ಹಾಕಿ, ನೀರು ಹಾಕಿದರೆ ಪರಿಸರ ಕಾಪಾಡಿದ ಹೆಮ್ಮೆ ನಮ್ಮದಾಗುತ್ತೆ. ಡ್ರೆಸ್ ಮೇಲೆ ಹಾಗೂ ಕೈಗೆ ಬ್ಯಾಂಡ್ ರೂಪದಲ್ಲಿಯೂ ಕಟ್ಟಿಕೊಳ್ಳುವ ಧ್ವಜ ತಯಾರಿಕೆ ಮಾಡಲಾಗಿದ್ದು, ಸುಮಾರು 10 ಸಾವಿರ ಧ್ವಜ, ಒಂದು ಸಾವಿರ ಕೈ ಪಟ್ಟಿ ಸಿದ್ಧಪಡಿಸಿರುವ ದಂಪತಿಗಳು. ಹುಬ್ಬಳ್ಳಿಯ ಶ್ರೇಯಾ ನಗರದ ಸಿರಿ ಪರಂಪರಾ ಸ್ಟೋರ್ ಹಾಗೂ ಧಾರವಾಡದ ನಾರಾಯಣ ನಗರದ ಆರ್ಗಾನಿಕ್ ಅಂಡಿಗಳಲ್ಲಿ ಧ್ವಜಗಳು ಲಭ್ಯವಾಗುತ್ತಿವೆ. ಅವಳಿ ನಗರದ ಪರಿಸರ ಸ್ನೇಹಿ ಶಾಪ್ ಗಳಲ್ಲಿಯೂ ಧ್ವಜಗಳ ಮಾರಾಟ ಮಾಡುತ್ತಿರುವದು ಮತ್ತೊಂದು ವಿಶೇಷವಾಗಿದೆ. ಪರಿಸರ ಸಂರಕ್ಷಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಧ್ವಜ ತಯಾರಿಸಲಾಗಿದ್ದು, ಸೀಡ್ ಪೇಪರ್ ಧ್ವಜಕ್ಕೆ ಅವಳಿನಗರದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇತ್ತೀಚೆಗೆ ಪ್ಲಾಸ್ಟಿಕ್ ಧ್ವಜ ಬಳಸಿ ಎಲ್ಲೆಂದರಲ್ಲಿ ಎಸೆದು ಅಪಮಾನ ಮಾಡುವುದು ಕಂಡು ಬರುತ್ತಿದ್ದು, ಜೊತೆಗೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ತೀವ್ರತರದ ಹಾನಿಯಾಗಲಿದೆ. ಇದರ ಬದಲಿಗೆ ಸೀಡ್ ಪೇಪರ್ ಧ್ವಜ ಬಳಸಿದಲ್ಲಿ ದೇಶಪ್ರೇಮ ಮತ್ತು ಪರಿಸರ ಪ್ರೇಮ ಎರಡನ್ನು ತೋರಿಸಿದಂತಾಗುತ್ತದೆ. ಮಣ್ಣಿಗೆ ಹಾಕಿದರೆ ಮೊಳಕೆಯಾಗಿ, ಗಿಡದ ಸ್ವರೂಪ ಪಡೆದು, ಬೇರೆ ರೂಪದಲ್ಲಿಯೂ ಉಪಯೋಗವಾಗುತ್ತದೆ. ಸೀಡ್ ಪೇಪರ್ ಫ್ಲ್ಯಾಗ್ ನಿಂದ ತುಳಸಿ, ಹೂವು, ಟೊಮೆಟೋ, ತರಕಾರಿಗಳನ್ನೂ ಪಡೆಯಬಹುದು ಎಂದು ವಿಶಿಷ್ಟ ಧ್ವಜ ತಯಾರಿಸಿರೋ ದಂಪತಿ ಅಕ್ಷತಾ ಭದ್ರಣ್ಣ ಹಾಗೂ ರಾಹುಲ್ ಪಾಗದ್ ಅಭಿಪ್ರಾಯಪಟ್ಟಿದ್ದಾರೆ.
ಹುಬ್ಬಳ್ಳಿ ಧಾರವಾಡದಲ್ಲಿ ಸೀಡ್ ಪೇಪರ್ ಧ್ವಜ ಖರೀದಿಸಿದ ಎಲ್ಲರು ಈಗ, ಅಕ್ಷತಾ-ರಾಹುಲ್ ದಂಪತಿಗಳ ಈ ವಿನೂತನ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಆಗಸ್ಟ್ 15 ರ 75ನೇ ವರ್ಷದ ಆಜಾದಿ ಅಮೃತ ಮಹೋತ್ಸವ ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ಹಾಗೂ ಮುಂಬರುವ ರಾಷ್ಟ್ರೀಯ ದಿನಾಚರಣೆಯಲ್ಲಿ ಪರಿಸರ ಸ್ನೇಹಿ ಧ್ವಜ ಅವಶ್ಯಕತೆ ತುಂಬಾನೇ ಇದ್ದು, ದೇಶದ ಪ್ರತಿಯೊಬ್ಬರೂ ಈ ಪರಿಸರ ಸ್ನೇಹಿ ಸೀಡ್ ಪೇಪರ್ ಧ್ವಜವನ್ನು ಬಳಸಿಕೊಳಬೇಕು ಎಂದು ಕರೆ ನೀಡುತ್ತಿದ್ದಾರೆ.