DISTRICT:
ಮಡಿಕೇರಿ: ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಮೃತದೇಹಳ ಬೆತ್ತಲೆ ಫೋಟೋ ತೆಗೆಯುತ್ತಿದ್ದ ವಿಕೃತ ಮನಸ್ಸಿನ ನೌಕರ ಸೈಯದ್ ಹುಸೇನ್ನನ್ನು ವೃದ್ಧೆ ಮೇಲಿನ ಅತ್ಯಾಚಾರಯತ್ನ ಪ್ರಕರಣದಡಿ ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.
ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ತಂದ ಪಾರ್ಥಿವ ಶರೀರದ ಬೆತ್ತಲೆ ಫೋಟೋ ತೆಗೆಯುತ್ತಿದ್ದ ಬಗ್ಗೆ ಹಿಂದು ಜಾಗರಣಾ ವೇದಿಕೆಯ ದೂರು ಆಧರಿಸಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಕಳ್ಳಿಚಂಡ ಕಾರ್ಯಪ್ಪ ಈತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ ಆತನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ಕಳುಹಿಸಲಾಗಿತ್ತು.
ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಈತ, ಮೃತದೇಹಗಳನ್ನು ವಿವಸ್ತ್ರಗೊಳಿಸಿ ಫೋಟೊ ತೆಗೆದು ಇಟ್ಟುಕೊಳ್ಳುತ್ತಿದ್ದ. ಮೃತದೇಹದ ಫೋಟೋ ತೆಗೆಯುವುದು, ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆ ಕುರಿತು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿತ್ತು. ಸೈಯದ್ ಹುಸೇನ್ ವಿರುದ್ಧ ಜನವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ನಡೆದ ವಿದ್ಯಮಾನದಲ್ಲಿ 74 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಆತನನ್ನು ಸೋಮವಾರ ಬಂಧಿಸಲಾಗಿದೆ.
ಕಳೆದ ಸೆಪ್ಟೆಂಬರ್ 22ರಂದು ರಾತ್ರಿ 11 ಗಂಟೆ ಸಮಯದಲ್ಲಿ ಮನೆ ಒಳಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ವೃದ್ಧೆ ನ.13ರಂದು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದರು. ವೃದ್ಧೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಯ ತಾಯಿಯಾಗಿದ್ದಾರೆ. ಈ ಮೊದಲು ಪೊಲೀಸ್ ಅಧಿಕಾರಿಯ ಪತ್ನಿ (ಜಿಲ್ಲಾಸ್ಪತ್ರೆ ಸಿಬ್ಬಂದಿ) ಮಡಿಕೇರಿ ನಗರ ಮಹಿಳಾ ಠಾಣೆಗೆ ದೂರು ನೀಡಿದ್ದರು.