DISTRICT: ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ಇಂದು ಬೆಳ್ಳಂಬೆಳಗ್ಗೆ ಆರಂಭವಾಗಿದೆ. ಹಳೆ ಅಂಜುಮನ್ ಏರಿಯಾ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆದ ವೇಳೆ ನಿವಾಸಿಗಳು ಕಣ್ಣೀರು ಹಾಕಿದ ಘಟನೆ ನಡೆದಿದೆ. ಕೆಲವು ಮನೆಗಳ ಮುಂದಿನ ಅತಿಕ್ರಮಣದ ಜಾಗ, ಶೆಡ್ಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಯಿತು. ಈ ವೇಳೆ ಕೋವಿಡ್ ಸಂದರ್ಭದಲ್ಲಿ ಇಂತಹ ತೆರೆವು ಕಾರ್ಯಾಚರಣೆ ಏಕೆ..? ಮುಂದೆ ಮಳೆಗಾಲ ಆರಂಭವಾಗುತ್ತಿದೆ, ಎಲ್ಲಿ ಹೋಗೋಣ ಎಂದು ಅಧಿಕಾರಿಗಳ ಎದುರು ಶೆಡ್ನಲ್ಲಿ ವಾಸಿಸುವ ಸ್ಥಳೀಯರು ಕಣ್ಣೀರಿಟ್ಟರು. ಅಲ್ಲದೇ ಸಮಯಾವಕಾಶ ನೀಡುವಂತೆ ಗೋಗರೆಯುತ್ತಿದ್ದ ದೃಶ್ಯಗಳು ಕಂಡು ಬಂದವು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸ್ಥಳದಲ್ಲಿ ನಗರಸಭೆ ಪೌರಾಯುಕ್ತ ಮುನಿಸ್ವಾಮಿ ಹಾಗೂ ಬಿಟಿಡಿಎ ಅಧಿಕಾರಿಗಳು ಉಪಸ್ಥಿತರಿದ್ದರು.