ಕೃಷ್ಣಭೈರೇಗೌಡ ಹೇಳಿಕೆ ಪ್ರಕಟಿಸಿದ್ದಕ್ಕೆ ಪತ್ರಕರ್ತರನ್ನು ನಿಂದಿಸಿದ ದೇವನಹಳ್ಳಿ ಶಾಸಕ

ದೇವನಹಳ್ಳಿ: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ದೇವನಹಳ್ಳಿ ಶಾಸಕರು ನಾಪತ್ತೆಯಾಗಿದ್ದಾರೆ ಎಂಬ ಮಾಜಿ ಸಚಿವ ಕೃಷ್ಣಭೇರೇಗೌಡ ಹೇಳಿಕೆಯನ್ನು ಸುದ್ದಿ ಮಾಡಿದ್ದಕ್ಕೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಪತ್ರಕರ್ತರನ್ನು ನಿಂದಿಸಿದ್ದಾರೆ.
ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ತಾಲ್ಲೂಕು ಜೆಡಿಎಸ್ ಅಡಕ್ ಕಮಿಟಿ ಸಭೆ ನಡೆದ ಸಂದರ್ಭದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಆಕ್ಷೇಪ ವ್ಯಕ್ತಪಡಿಸಿ, ಇನ್ನು ನೂರು ವರ್ಷ ಕಳೆದರೂ ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ, ಯಾರದೋ ಹೇಳಿಕೆಯನ್ನು ಪತ್ರಕರ್ತರು ಬರೆದ ಮಾತ್ರಕ್ಕೆ ಏನೂ ಆಗುವುದಿಲ್ಲ. ಇಲ್ಲಿ ಮೀಸಲಾತಿ ಕೊನೆಯಾದರೂ ನಾನು ಹೇಳಿದ ವ್ಯಕ್ತಿಯೇ ಶಾಸಕನಾಗುವುದು. ನನ್ನ ಮಾತಿನ ಹೊರತು ಇಲ್ಲಿ ಏನೂ ನಡೆಯುವುದಿಲ್ಲ ಎಂದು ಪತ್ರಕರ್ತರಿಗೆ ಸಾರ್ವಜನಿಕವಾಗಿಯೇ ಸವಾಲು ಹಾಕಿದರು.
ಶಾಸಕರು ಪತ್ರಕರ್ತರನ್ನು ನಿಂದಿಸಿದ ಬೆನ್ನಿಗೇ ದೇವನಹಳ್ಳಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಭರತ್ ಕುಮಾರ್ ಜೆಡಿಎಸ್ ಕಾರ್ಯಕ್ರಮಗಳಿಗೆ ಇನ್ನು ಮುಂದೆ ಮಾಧ್ಯಮಗಳಿಗೆ ಪ್ರವೇಶ ಇಲ್ಲ ಎಂದು ಪತ್ರಕರ್ತರ ಮುಂದೆ ಕೂಗಾಡಿದ ಘಟನೆ ನಡೆಯಿತು.