DISTRICT:
ಬೆಳಗಾವಿ: ಹಿಜಾಬ್-ಕೇಸರಿ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದ ನಡುವೆಯೂ ಜಿಲ್ಲೆಯ ಸರ್ದಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲವು ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿ ಬಂದಿದ್ದರು.
ವಿದ್ಯಾರ್ಥಿನಿಯರನ್ನು ಶಾಲೆಗೆ ಬಿಡಲು ಅವರ ಪೋಷಕರು ಆಗಮಿಸಿದ್ದರು. ಹೈಕೋರ್ಟಿನ ಮಧ್ಯಂತರ ಆದೇಶದ ಪ್ರಕಾರ ಧಾರ್ಮಿಕ ಸಂಕೇತಗಳನ್ನು ಧರಿಸಿ ಬರುವಂತಿಲ್ಲ ಎಂದು ಅಧ್ಯಾಪಕರು ತಿಳಿ ಹೇಳಿದರು.
ಈ ವಿಷಯವಾಗಿ ಪೋಷಕರು ಮತ್ತು ಶಾಲೆಯವರ ನಡುವೆ ಚರ್ಚೆ ನಡೆಯಿತು. ಹಿಜಾಬ್ ತೆಗೆಯಲು ಆಗುವುದಿಲ್ಲ ಎಂದು ಪೋಷಕಿಯೊಬ್ಬರು ಪಟ್ಟು ಹಿಡಿದರು. ಬಳಿಕೆ ವಿದ್ಯಾರ್ಥಿನಿಯೊಬ್ಬರು ಹಿಜಾಬ್ ಸಮೇತವಾಗಿಯೇ ತರಗತಿಗೆ ತೆರಳಿದರು.
ಶಿವಮೊಗ್ಗ, ಕೊಪ್ಪಳ, ಯಾದಗಿರಿ ಮತ್ತಿತರ ಜಿಲ್ಲೆಗಳ ಕೆಲವು ಶಾಲೆಗಳಲ್ಲಿ ಹಿಜಾಬ್ ಮತ್ತು ಧಾರ್ಮಿಕ ಸಂಕೇತಗಳನ್ನು ಧರಿಸಿಯೇ ವಿದ್ಯಾರ್ಥಿಗಳು ತರಗತಿ ಪ್ರವೇಶ ಪಡೆದಿದ್ದಾರೆ. ಶಿವಮೊಗ್ಗ ಮತ್ತಿತರ ಕಡೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲೂ ಅವಕಾಶ ನೀಡದ ಕಾರಣ ವಿದ್ಯಾರ್ಥಿನಿಯರು ನಿರಾಶರಾಗಿ ಶಾಲೆಯಿಂದ ಮರಳಿದ್ದಾರೆ.