DISTRICT: ಚಿಕ್ಕೋಡಿ: ಲಾಕ್‌ಡೌನ್ ನಿಂದ ಕೂಲಿ ಕಾರ್ಮಿಕರ ಹಾಗೂ ಬಡ ವರ್ಗದ ಜನರಿಗೆ ಜೀವನ ಸಾಗಿಸುವುದು ಸವಾಲಿನ ಕೆಲಸವೇ ಆಗಿದೆ, ಕೆಲಸ ಆಹಾರ ಇಲ್ಲದೆ ಲಾಕ್ ಡೌನ್ ನ ದಿನಗಳನ್ನ ಕಳೆಯುವುದೇ ಚಿಕ್ಕೋಡಿಯ ಬಡ ಜನರಿಗೆ ಸಂಕಷ್ಟವಾಗಿದೆ, ಈ ಸಂದರ್ಭದಲ್ಲಿ ಕಾನೂನು ಪಾಲನೆ ಜೊತೆ ನೊಂದವರ ಹೊಟ್ಟೆ ತುಂಬಿಸಿ ಪಿಎಸ್ಐಗಳು ಮಾನವೀಯತೆ ಮೆರೆದಿದ್ದಾರೆ. ಕಾನೂನು ವ್ಯವಸ್ಥೆ ಜೊತೆ ಜನಸೇವೆಗೂ ನಾವು ಸೈ ಎಂದ ಚಿಕ್ಕೋಡಿ, ನಿಪ್ಪಾಣಿ ಪಿಎಸ್ಐಗಳು ಬಡ ಜನರಿಗೆ ಆಹಾರದ ಕಿಟ್ ವಿತರಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆ ಪಿಎಸ್ಐ ರಾಕೇಶ್ ಬಗಲಿ ಹಾಗೂ ನಿಪ್ಪಾಣಿ ಶಹರ ಪೋಲಿಸ್ ಠಾಣೆ ಪಿಎಸ್ಐ ಅನಿಲ್ ಕುಂಬಾರ ಅಧಿಕಾರಿಗಳು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು. ಪಿಎಸ್ಐಗಳುಲಾಕ್ಡೌನ್ನಿಂದಾಗಿ ನೊಂದವರನ್ನು ಗುರುತಿಸಿ ನೆರವು ನೀಡಲು ಮುಂದಾದ ಈ ಇಬ್ಬರು ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೆ ಹಸಿವಿನಿಂದ ನರಳುತ್ತಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿ 50ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಅಧಿಕಾರಿಗಳ ಈ ಸೇವೆಗೆ ಚಿಕ್ಕೋಡಿ ಹಾಗೂ ನಿಪ್ಪಾಣಿ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.