DISTRICT:
ಬೀದರ್: ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ರಾಜ್ಯದ ಗಡಿ ಜಿಲ್ಲೆಯ ಸಂಸದ ಭಗವಂತ ಖೂಬಾ ಅವರಿಗೆ ಮಂತ್ರಿ ಭಾಗ್ಯ ಒಲಿದು ಬಂದಿದೆ. ಎರಡನೇ ಬಾರಿ ಸಂಸದರಾಗಿ ಆಯ್ಕೆಯಾದ ಭಗವಂತ ಖೂಬಾ ಈ ಉನ್ನತ ಹುದ್ದೆಗೇರಿದ್ದಾರೆ.
ಸಾಮಾನ್ಯ ಕಾರ್ಯಕರ್ತನಾಗಿದ್ದ ಭಗವಂತ ಖೂಬಾ ಮೊದಲ ಬಾರಿಗೆ ಬಿಜೆಪಿ ಟಿಕೆಟ್ ಪಡೆದು ಬೀದರ್ನಲ್ಲಿ ಮಾಜಿ ಸಿಎಂ ದಿ.ಎನ್ ಧರಂಸಿಂಗ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಸೊಲಿಸಿದ್ದರು. ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಸೋಲಿಸಿ ಎರಡನೇ ಬಾರಿ ಸಂಸದರಾಗಿ ಆಯ್ಕೆಯಾದ ಭಗವಂತ ಖೂಬಾ ಅವರು ಈಗ ಮಂತ್ರಿ ಸ್ಥಾನ ಪಡೆದಿದ್ದಾರೆ.
ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಲಬುರಗಿ ಮೂಲದ ಶರಣು ಸಲಗರ ಅವರನ್ನು ಸ್ಪರ್ಧೆಗೆ ಇಳಿಸಿ ಚುನಾವಣೆಯಲ್ಲಿ ವಿಜಯ ಪತಾಕೆ ಬಾರಿಸುವ ಮೂಲಕ ಹೈಕಮಾಂಡ್ ಗಮನ ಸೇಳೆದಿದ್ದರು. ಇದೆಲ್ಲದರ ಫಲವಾಗಿ ಇಂದು ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಭಾಗ್ಯ ಸಿಕ್ಕಿದೆ.
ಸಂಸದ ಭಗವಂತ ಖೂಬಾ ಸಾಮಾನ್ಯ ಕಾರ್ಯಕರ್ತನಿಂದ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಇಂದು ಕೇಂದ್ರ ಸಚಿವ ಸ್ಥಾನದವರೆಗಿನ ಪ್ರಯಾಣ ರೋಚಕವಾಗಿದೆ. ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ 1 ಜೂನ್ 1967 ರಲ್ಲಿ ಮಹಾದೇವಿ ಗುರುಬಸಪ್ಪ ದಂಪತಿ ಮಗನಾಗಿ ಜನಿಸಿದ ಅವರು, ತುಮಕೂರಿನ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಿಂದ ಬಿಇ ಪದವಿ ಪಡೆದು 2005ರವರೆಗೆ ರೈಲ್ವೆ ಇಲಾಖೆಯ ವಿವಿಧ ಗುತ್ತಿಗೆಯ ಕೆಲಸದಲ್ಲಿ ತೊಡಗಿದ್ದರು. ಇದೇ ವೇಳೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯದಲ್ಲಿ ಸಕ್ರಿಯವಾಗಿದ್ದು, ಭಾರತಿಯ ಜನತಾ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಂಡು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ನಿಭಾಯಿಸಿದ್ದರು.
ನಂತರ 2014 ರಲ್ಲಿ ಪತಂಜಲಿ ಸಂಸ್ಥೆಯ ಬಾಬಾ ರಾಮದೇವ ಅವರ ಕೃಪೆಯಿಂದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಕಾಂಗ್ರೆಸ್ ಅಭ್ಯರ್ಥಿ ದಿ.ಧರಂಸಿಂಗ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಸೋಲಿಸಿ ಬೀದರ್ ಸಂಸದರಾದರು. ನಂತರ 2019 ರ ಲೋಕಸಭೆ ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ ಗೆಲುವು ಸಾಧಿಸಿ ಭಗವಂತ ಖೂಬಾ ಅವರು ಈಗ ಕೇಂದ್ರೆ ಸಚಿವರಾಗಿದ್ದಾರೆ.