DISTRICT:
ಬೆಂಗಳೂರು: ಅಂಗವಿಕಲರ ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ ಜಾರಿಗೆ ತರಲಿದ್ದು, 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಶಕ್ತೀಕರಣ ನಿರ್ದೇಶನಾಲಯದಿಂದ ಶನಿ ವಾರ ಕಂಠೀರವ ಒಳಾಂಗಣ ಕ್ರೀಡಾಂಗಣ ದಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು. ಈಗಾಗಲೇ ಅಂಗವಿಕಲ ಮಕ್ಕಳಿಗಾಗಿ ಸರಕಾರದಿಂದ ಕೆಲವು ಯೋಜನೆ ರೂಪಿಸ ಲಾಗಿದೆ. ಅದರ ಜತೆಗೆ ಅಂಗವಿಕಲರ ಆರೋಗ್ಯಕ್ಕಾಗಿ ಐದು ಲಕ್ಷ ರೂ. ಮೊತ್ತದ ವಿಮೆ ಜಾರಿಗೆ ತರಲಾಗುತ್ತದೆ ಎಂದರು.
ಅಂಗವಿಕಲರು ಯಶಸ್ವಿಯಾಗಿ ಬದುಕು ನಡೆಸಲು ಸರಕಾರ ನಿರ್ಮಿಸುವ ಮನೆಗಳಲ್ಲಿ ಶೇ. 3ರಷ್ಟು ಮೀಸಲಾತಿ ನೀಡಲಾಗುವುದು. ಬುದ್ಧಿಮಾಂದ್ಯ ಮಕ್ಕಳಿಗೆ ವರ್ಕ್ ಶಾಪ್ ಸ್ಥಾಪಿಸಲು ಸರಕಾರ ಬದ್ಧವಾಗಿದೆ. ಜತೆಗೆ ಅಂಗ ವಿಕಲರಿಗೆ ಮಾ. 31ರೊಳಗೆ ಎರಡು ಸಾವಿರ ವಿದ್ಯುತ್ಛಕ್ತಿಚಾಲಿತ ಟ್ರೈಸಿಕಲ್ ನೀಡಲಾಗುತ್ತದೆ. ಅದಕ್ಕಾಗಿ ಈಗಾಗಲೇ 15 ಕೋಟಿ ರೂ. ನೀಡ ಲಾಗಿದ್ದು, ಈ ವರ್ಷದ ಯೋಜನೆಗೆ 25 ಕೋಟಿ ರೂ. ನೀಡಲಾಗುತ್ತದೆ ಎಂದರು.
ಮುಂದಿನ ಬಜೆಟ್‌ನಲ್ಲಿ ಅಂಗವಿಕಲರ ವಿದ್ಯಾಭ್ಯಾಸಕ್ಕಾಗಿ ವಿಶೇಷ ಅನುದಾನ ನೀಡ ಲಾಗುತ್ತದೆ. ವಸತಿ ಶಾಲೆಗಳಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ನೀಡಲಾಗುತ್ತಿದ್ದ 6,800 ರೂ.ಗಳನ್ನು 10,200 ರೂ.ಗೆ ಹೆಚ್ಚಿಸಲಾಗಿದೆ. ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆಗಳಲ್ಲಿ ನೀಡಲಾಗುತ್ತಿದ್ದ 6,000 ರೂ. ಗಳನ್ನು 9,000 ರೂ.ಗೆ ಹೆಚ್ಚಿಸಲಾಗಿದೆ ಎಂದರು.
ದೇವರ ವಿಶೇಷ ಮಕ್ಕಳು
ಕೀಳರಿಮೆ ಬೇಡ. ನಿಮ್ಮ ಸವಾಲುಗಳನ್ನು ಎದುರಿಸಲು ದೇವರು ಶಕ್ತಿ ಕೊಟ್ಟಿದ್ದಾನೆ. ವಿಶೇಷ ಮಕ್ಕಳು, ವಿಶೇಷ ಶಕ್ತಿ ಹೊಂದಿರು ವವರು ದೇವರ ವಿಶೇಷವಾದ ಮಕ್ಕಳು. ನಿಮಗೆ ಆತ್ಮವಿಶ್ವಾಸ ಬಹಳ ಮುಖ್ಯ. ನಿಮಗೆ
ಅನುಕಂಪದ ಆವಶ್ಯಕತೆ ಇಲ್ಲ. ಅಂಗವಿಕಲ ರನ್ನು ಸಶಕ್ತಗೊಳಿಸುವ ಸಮಾಜ ಅಗತ್ಯ. ಕೆಳಗೆ ಬೀಳುವ ವ್ಯಕ್ತಿಯನ್ನು ಮೇಲೆತ್ತುವುದು ಮಾನವ ಧರ್ಮ, ಇದು ವಿಶ್ವಮಾನವ ಸಮಾಜ. ಒಬ್ಬರಿಗೊಬ್ಬರು ಪರಸ್ಪರ ನೆರವು ನೀಡಿ ಮಾನವೀಯ ಗುಣವನ್ನು ಎಲ್ಲರೂ ಪಾಲಿಸಬೇಕು ಎಂದು ಸಿಎಂ ಹೇಳಿದರು.