DISTRICT: ಚಿಕ್ಕಮಗಳೂರು: ಜಿಲ್ಲೆಯ ಎಲ್ಲ ಶಾಸಕರನ್ನು ಕಡೆಗಣಿಸುತ್ತಿರುವ ಜಿಲ್ಲಾಧಿಕಾರಿ ಓರ್ವ ಶಾಸಕರಿಗೆ ಮಾತ್ರ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂದು ದೂರಿರುವ ಮೂವರು ಶಾಸಕರು, ಪ್ರತ್ಯೇಕ ಸಭೆ ನಡೆಸಿ ಡಿಸಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾದ ಜಿಲ್ಲಾಧಿಕಾರಿ ರಮೇಶ್ ಕೇವಲ ಸಿ.ಟಿ.ರವಿಗೆ ಮಾತ್ರ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಆರೋಗ್ಯ ಸಚಿವ ಸುಧಾಕರ್ ಭೇಟಿ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಕಡೂರು ಶಾಸಕ ಬೆಳ್ಳಿಪ್ರಕಾಶ್, ತರೀಕೆರೆ ಶಾಸಕ ಸುರೇಶ್ ಮೂವರು ಈ ಬಗ್ಗೆ ಪರಸ್ಪರ ಚರ್ಚೆ ನಡೆಸಿ, ಡಿ.ಸಿ.ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಜಿಲ್ಲೆಯ ಮೇಲೆ ಆಡಳಿತಾತ್ಮಕ ವಿಷಯದಲ್ಲಿ ವಿಫಲವಾಗಿರುವ ಜಿಲ್ಲಾಧಿಕಾರಿಯನ್ನು ಬದಲಾಯಿಸಬೇಕಾದ ಅನಿವಾರ್ಯತೆ ಇದೆ ಎಂಬ ನಿರ್ಧಾರಕ್ಕೆ ಬಂದ ಮೂವರು ಶಾಸಕರು ನಡೆಸಿದ ಸಭೆಯಲ್ಲಿ ಅನೇಕ ವಿಷಯಗಳು ಪ್ರಸ್ತಾಪವಾದವು. ಜಿಲ್ಲಾ ಪಂಚಾಯಿತಿಯಲ್ಲಿ ಸೂಪರ್ ಸಿಇಒ ಓರ್ವರು ಕೆಲಸ ಮಾಡುತ್ತಿದ್ದಾರೆ. ಆಡಳಿತ ಸೂತ್ರವನ್ನು ಮಾಜಿ ಉಪಾಧ್ಯಕ್ಷರೋರ್ವರು ನಿಯಂತ್ರಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳಿಸಬೇಕೆಂಬ ತೀರ್ಮಾನ ಹೊರಬಿದ್ದಿದ್ದು, ಜಿಲ್ಲೆಯ ವಿದ್ಯಮಾನಗಳನ್ನು ಸಿಎಂ ಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಜನರೊಂದಿಗೆ ಡಿಸಿ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳ, ವಿವಿಧ ರಾಜಕೀಯ ಪಕ್ಷಗಳ ಮುಖಂಡರ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎನ್ನುವ ಆರೋಪದ ಬೆನ್ನಲ್ಲೇ ಆಡಳಿತ ಪಕ್ಷದ ಶಾಸಕರೇ ಜಿಲ್ಲಾಧಿಕಾರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಜಿಲ್ಲಾಧಿಕಾರಿಗಳ ಎತ್ತಂಗಡಿಗೆ ಕಾರಣವಾಗುವ ಸಾಧ್ಯತೆಯಿದೆ.