DISTRICT: ಚಿಕ್ಕಮಗಳೂರು : ಸಂಸದ ನಳೀನ್ ಕುಮಾರ್ ಕಟೀಲ್ ಅರಣ್ಯ ಇಲಾಖೆಯವರು ವಿಧಿಸಿದ್ದ ನಿಯಮ ಉಲ್ಲಂಘಿಸಿ ಚಾರ್ಮಾಡಿ ಘಾಟ್ ರಸ್ತೆಬದಿ ವಾನರಗಳಿಗೆ ಹಣ್ಣು ಕೊಟ್ಟಿದ್ದಾರೆ. ಕಾಡು ಪ್ರಾಣಿಗಳಿಗೆ ಹಣ್ಣುಹಂಪಲು, ಆಹಾರ ನೀಡಬಾರದು ಎಂಬುದು ಅರಣ್ಯ ಇಲಾಖೆಯ ನಿಯಮ. ಆಹಾರ, ಹಣ್ಣುಗಳನ್ನು ನೀಡುತ್ತಿದ್ದರೆ ಅವುಗಳು ಕ್ರಮೇಣ ಆಹಾರ ಪದ್ಧತಿ ಬದಲಾಯಿಸಿ, ಕಾಡಿನಿಂದ ನಾಡಿಗೆ ಬರುತ್ತವೆ. ಅಲ್ಲದೆ ರಸ್ತೆಗೆ ಜಿಗಿದು ಬಂದು ವಾಹನ ಸಂಚಾರ ಮಾಡುವವರಿಗೆ ತೊಂದರೆಯಾಗುತ್ತದೆ. ಅಲ್ಲದೆ ಎಷ್ಟೋ ಮಂಗಗಳು ವಾಹನಗಳ ಅಡಿಗೆ ಬಿದ್ದು ಸಾಯುತ್ತವೆ. ಹೀಗಾಗಿ ಮಂಗಗಳಿಗೆ ಆಹಾರ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅರಣ್ಯ ಇಲಾಖೆ ಎಚ್ಚರಿಸಿದೆ. ಹೀಗಿರುವಾಗ ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಬಾಳೆಹಣ್ಣು ನೀಡಿದ್ದಾರೆ. ಜನಪ್ರತಿನಿಧಿಗಳೇ ಹೀಗೆ ನಿಯಮ ಉಲ್ಲಂಘಿಸಿದರೆ ಹೇಗೆ? ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.