DISTRICT:
ದಾವಣಗೆರೆ: ಹೈಕಮಾಂಡ್ ನಿಂದ ಬರುವ ಸೂಚನೆ ಪಾಲಿಸುವುದಾಗಿ ಸಿಎಂ ಯಡಿಯೂರಪ್ಪ ಅವರೇ ಹೇಳಿದ್ದು, ಎಲ್ಲಿಯೂ ರಾಜೀನಾಮೆ ಕೊಡುತ್ತೇನೆ ಎಂದಿಲ್ಲ. ರಾಷ್ಟ್ರೀಯ ನಾಯಕರ ಸೂಚನೆ ಏನು ಎಂಬುದು ಗೊತ್ತಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಯಾವ ನಾಯಕರು ಯಡಿಯೂರಪ್ಪನವರ ರಾಜೀನಾಮೆ ಕೇಳಿಲ್ಲ. ನೀವು ಕೊಡಿ ಅಂತಾನೂ ಹೇಳಿಲ್ಲ. ಯಡಿಯೂರಪ್ಪನವರು ಮತ್ತು ಹೈ ಕಮಾಂಡ್ ನಾಯಕರ ಮಧ್ಯೆ ಏನು ಮಾತುಕತೆ ಆಗಿದೆ ಗೊತ್ತಿಲ್ಲ. ಒಂದು ವೇಳೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದರೆ, ವರಿಷ್ಠರ ಸೂಚನೆಯಂತೆ ಶಾಸಕಾಂಗದ ಪಕ್ಷದ ಸದಸ್ಯರು ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದರು.
ಮಿತ್ರಮಂಡಳಿ ಶಾಸಕರು, ಸಚಿವರಿಗೆ ಯಾವುದೇ ಆತಂಕ ಇಲ್ಲ. ಅವರು ಬೇರೆ ಪಕ್ಷದ ಶಾಸಕರಲ್ಲ, ಬದಲಾಗಿ ನಮ್ಮ ಪಕ್ಷದ ಶಾಸಕರು. ಅವರ ಸ್ಥಾನಮಾನಕ್ಕೆ ಯಾವುದೇ ಭಂಗ ಬರುವುದಿಲ್ಲ ಎಂದು ರೇಣುಕಾಚಾರ್ಯ ಅಭಿಪ್ರಾಯಪಟ್ಟರು.
ಸಚಿವ ಸ್ಥಾನಕ್ಕೆ ಕೊಟ್ಟರೆ ನಿಭಾಯಿಸಲು ಸಿದ್ದ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಸಚಿವ ಸ್ಥಾನ ಕೇಳಲು ದೆಹಲಿಗೆ ಹೋಗಿಲ್ಲ. ಅಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದೇನೆ. ಸಚಿವರಾಗಬೇಕೆಂದು ಸಹಜವಾಗಿ ಎಲ್ಲರಿಗೂ ಆಸೆ ಇರುತ್ತದೆ. ಪಕ್ಷದ ವರಿಷ್ಠರು ಸಂಘಟನೆ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ತಿಳಿಸಿದರು.