DISTRICT:
ಕೊಡಗು : ಎಲ್ಲಿ ನೋಡಿದರೂ ಹಸಿರುಗಳಿಂದ ಕೂಡಿ ಶ್ವೇತವರ್ಣದ ಹೂಗಳಿಂದ ಕೂಡಿ ಕಂಗೊಳಿಸುತ್ತಿದೆ ಕಾಫಿ ತೋಟಗಳು. ಶ್ವೇತ ವರ್ಣದ ಹೂಗಳಿರುವ ಕಾಫಿ ತೋಟದಲ್ಲಿ ದುಂಬಿಗಳ ಝೇಂಕಾರ ಮುಗಿಲು ಮುಟ್ಟುತ್ತಿದೆ. ಕಾಫಿ ನಾಡು ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಘಮ-ಘಮಿಸುತ್ತಾ ಕಂಗೊಳಿಸುವ ಶ್ವೇತಸುಂದರಿ ಕಾಫಿ ಹೂ ತನ್ನೆಡೆಗೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ನಯನ ಮನೋಹರವಾದ ದೃಶ್ಯ ಕಾಣುತ್ತಿರುವುದು ದಕ್ಷಿಣದ ಕಾಶ್ಮೀರ ಖ್ಯಾತಿಯ ಕೊಡಗು ಜಿಲ್ಲೆಯಲ್ಲಿ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡಿದರೆ ಪ್ರವಾಸಿಗರನ್ನು ಸ್ವಾಗತಿಸುವುದು ಕೂಡ ಶ್ವೇತ ವರ್ಣದ ಈ ಸುಂದರಿ ಕಾಫಿ ಹೂಗಳು. ಕಾಫಿ ಹೂಗಳ ವಾಸನೆ ಮತ್ತು ಸೌಂದರ್ಯಕ್ಕೆ ಪ್ರವಾಸಿಗರು ಮಾರು ಹೋಗಿದ್ದಾರೆ.
ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ನಂತರ ಅತೀ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಅಂದರೆ ಅದು ಕೊಡಗು. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಕಾಫಿ ಕೊಯ್ಲು ನಡೆದು ಕೆಲವೆಡೆ ಮಳೆಯ ಸಿಂಚನವಾಗಿ ಹೂ ಹರಳಿದ್ದರೆ, ಕೊಡಗಿನ ಹಲವೆಡೆ ಕೃತಕ ಮೂಲ ಮೂಲಕ ನೀರು ಹಾಯಿಸಲಾಗಿತ್ತು.
ಇದೀಗ ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾಫಿ ಹೂಗಳು ಅರಳಿ ಸುವಾಸನೆ ಬೀರುತ್ತಿದೆ. ಎಲ್ಲೆಡೆ ಈಗ ಬಿಳಿಬಣ್ಣದ ಕಾಫಿ ಹೂಗಳದ್ದೇ ಕಾರುಬಾರು. ಕೊಡಗಿನ ರಸ್ತೆಯಲ್ಲಿ ಸಂಚಾರ ಮಾಡಿದರೆ ಕಣ್ಣಿಗೆ ಕಾಣುವ ಈ ಹೂಗಳು ಮನಸ್ಸಿಗೆ ಆನಂದ ನೀಡುತ್ತವೆ.
ಕಾಫಿ ಹೂ ಅರಳಬೇಕಾದರೆ ಕನಿಷ್ಠ 50 ಸೆಂಟಿ ಮೀಟರ್ ಮಳೆಯಾಗಬೇಕು. ಪ್ರತೀ ವರ್ಷ ಸರಿಯಾದ ಸಮಯಕ್ಕೆ ಮಳೆಯಾಗಿ ಕಡಿಮೆ ಖರ್ಚಿನಲ್ಲಿ ಕಾಫಿ ತೋಟದಲ್ಲಿ ಹೂ ಅರಳಿ ರೈತರ ಮುಖದಲ್ಲಿ ಸಂತೋಷ ಮೂಡಿಸುತ್ತಿತ್ತು. ಆದರೆ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದಿದ್ದರೂ, ಕಾಫಿ ಬೆಳೆಗಾರರು ತಮ್ಮಲ್ಲಿದ್ದ ಹಣವನ್ನು ವ್ಯಯಿಸಿ ತೋಟಗಳಿಗೆ ಕೃತಕ ನೀರು ಹಾಯಿಸುವುದರ ಮೂಲಕ ಹೂ ಅರಳುವಂತೆ ಮಾಡಿದ್ದಾರೆ.