DISTRICT:
ಕೊಡಗು: ಜಿಲ್ಲೆಯ ಪಾಲೇಮಾಡಿನಲ್ಲಿ 12 ಎಕರೆ 70 ಸೆಂಟ್ಸ್ ಜಾಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದ್ದು, ಇದೀಗ ಗ್ರಾಮಸ್ಥರು ಅಲ್ಲಿರುವ 2 ಎಕರೆ ಸ್ಮಶಾನದ ಜಾಗ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ತಮ್ಮ ಪೂರ್ವಜರ ಸಮಾಧಿ ಇರುವ ಎರಡು ಎಕರೆ ಪ್ರದೇಶದಲ್ಲಿ ಕ್ರಿಕೆಟ್ ಸ್ಟೇಡಿಯಂ ಮಾಡುವುದು ಬೇಡ. ಉಳಿದ ಜಾಗದಲ್ಲಿ ಬೇಕಾದರೆ ಮಾಡಲಿ ಎಂದು ಪಾಲೇಮಾಡಿನ ಗ್ರಾಮಸ್ಥರು ಕೊಡಗಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವನ್ನು ವಿರೋಧಿಸಿದ್ದಾರೆ.
ಈ ಕುರಿತು ಪರ-ವಿರೋಧ ಚರ್ಚೆಯ ನಡುವೆ ಸ್ಟೇಡಿಯಂ ಕಾಮಗಾರಿ ಮಂದಗಾತಿಯಲ್ಲಿ ಸಾಗುತ್ತಿದೆ. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾದರೆ ಜಿಲ್ಲೆಯೂ ಅಭಿವೃದ್ಧಿ ಆಗುತ್ತದೆ ಎನ್ನುವ ಗ್ರಾಮಸ್ಥರು ಒಂದು ಕಡೆಯಾದರೆ, ಇನ್ನೊಂದು ಕಡೆ ತಮ್ಮ ಪೂರ್ವಜರ ಸಮಾಧಿ ಮೇಲೆ ಕ್ರಿಕೆಟ್ ಸ್ಟೇಡಿಯಂ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ.
ಸರ್ಕಾರ ಈಗಾಗಲೇ ಇವರಿಗೆ ಒಂದು ಎಕರೆ ಸ್ಮಶಾನ ಜಾಗ ಮಂಜೂರು ಮಾಡಿದ್ದು, 12 ಏಕರೆ 70 ಸೆಂಟ್ಸ್ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಸರ್ವೇ ಮಾಡಿ ಜಾಗ ಅಂತಿಮ ಮಾಡಿದೆ. ಆದರೆ ಪಾಲೆಮಾಡು ನಿವಾಸಿಗಳು ಮಾತ್ರ ಇದಕ್ಕೆ ಒಪ್ಪುತ್ತಿಲ್ಲ.