DISTRICT:
ಕಾರವಾರ : ಕಳೆದ ಕೆಲವು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಳ್ಳಗಳು ಉಕ್ಕಿ ಹರಿಯುತ್ತಿವೆ.ಹಳ್ಳದ ನೀರಿನ ರಭಸಕ್ಕೆ ಅಂಕೋಲಾ ತಾಲೂಕಿನ ಹಟ್ಟಿಕೇರಿಯಿಂದ ಕುಗ್ರಾಮಕ್ಕೆ ಸಂಪರ್ಕಿಸುವ ಬಿದಿರಿನ ಸೇತುವೆ ಕೊಚ್ಚಿ ಹೋದ ಪರಿಣಾಮ 9 ಕುಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಹಟ್ಟಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗೂಳೆ,ಕೆಂದಗಿ,ಲಕ್ಕೆಗುಳಿ,ಸಿಕಳಿ, ತುರ್ಲಿ, ಮಲಗದ್ದೆ,,ಹೀರೆಮನೆ,ಕೋಟೆಬಾವಿ,ಮನ್ನಾಣಿ ಗ್ರಾಮಗಳು ಅಕ್ಷರಶಃ ನಾಗರಿಕ ಮತ್ತು ಪಟ್ಟಣದ ಸಂಪರ್ಕವನ್ನು ಕಡಿದುಕೊಂಡಿದೆ.ಈ ಎಲ್ಲಾ ಗ್ರಾಮಗಳಲ್ಲಿ 400 ಕ್ಕೂ ಹೆಚ್ಚು ಜನಸಂಖ್ಯೆ ಇದೆ.ಬಿದಿರಿನ ಸೇತುವೆ ಕೊಚ್ಚಿ ಹೋದ ಪರಿಣಾಮ ಈ ಗ್ರಾಮಗಳ ನಾಗರಿಕರು ದಿಗ್ಬಂಧನಕ್ಕೊಳಗಾದಂತಾಗಿದೆ.
ಮಳೆಗಾಲ ಆರಂಭವಾಗುತ್ತಲೇ ಹಟ್ಟಿಕೇರಿಯಿಂದ ಈ 9 ಗ್ರಾಮಗಳ ಸಂಪರ್ಕಕ್ಕೆ ಸೇರುವ ಮಧ್ಯೆ ಇದ್ದ ಹಳ್ಳವು ತುಂಬಿ ರಭಸದಿಂದ ಹರಿಯುತ್ತದೆ.ಇಲ್ಲಿ ಗ್ರಾಮಸ್ಥರೇ ಕೂಡಿಕೊಂಡು ಬಿದಿರಿನ ಸೇತುವೆಯನ್ನು ತಾತ್ಕಾಲಿಕವಾಗಿ ನಿರ್ಮಿಸಿಕೊಂಡು ಮೂಲಭೂತ ಅವಶ್ಯಕತೆಗೆ ಹಟ್ಟಿಕೇರಿಗೆ ಹೋಗಿ ಬರುತ್ತಿದ್ದರು.ಆದರೆ ಭಾರಿ ಮಳೆಯಿಂದಾಗಿ ಸೇತುವೆ ಸಹ ನೀರಿಗೆ ಕೊಚ್ಚಿ ಹೋಗಿದ್ದು, 9 ಕುಗ್ರಾಮಗಳಲ್ಲಿ ಭಯದ ಕಾರ್ಮೋಡ ಕವಿದಿದೆ.
ಈ ಎಲ್ಲಾ ಗ್ರಾಮಗಳಿಗೆ ಸಾಗಲು ಪ್ರಮುಖವಾಗಿ 5 ಸೇತುವೆಗಳ ಅವಶ್ಯಕತೆ ಇದೆ.ಈಗಾಗಲೇ ಶಾಸಕಿ ರೂಪಾಲಿ ನಾಯ್ಕ ಬೊಕಳೆ ಹಳ್ಳಕ್ಕೆ 20 ಲಕ್ಷ ರೂ. ಹಾಗೂ ದೊಡ್ಡಹಳ್ಳದ ಕಾಲು ಸಂಕಕ್ಕೆ 10 ಲಕ್ಷ ರೂ. ಅನುದಾನಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದರು.ಇನ್ನುಳಿದ 3 ಕಾಲು ಸಂಕವು ಆಗಬೇಕಿದೆ.
ದಟ್ಟಕಾಡಿನ ಮಧ್ಯೆ ಇರುವ ಈ 9 ಕುಗ್ರಾಮಗಳ ಜನರು ಯಾವುದೇ ಮೂಲಭೂತ ಅವಶ್ಯಕತೆಗಾಗಿ ಹಟ್ಟಿಕೇರಿಗೆ ಬರಬೇಕು.ರೇಷನ್, ಆಸ್ಪತ್ರೆಗಳಿಗೂ ಹಟ್ಟಿಕೇರಿ ಊರೇ ಇವರಿಗೆ ಆಧಾರ.ಆದರೆ ಬಿದಿರಿನ ಸೇತುವೆ ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರಿಂದ ನಾಗರಿಕ ಸಂಪರ್ಕವು ಸಿಗದಂತಾಗಿದೆ. ಇಲ್ಲಿಯ ಗರ್ಭಿಣಿಯರೂ,ವಯೋವೃದ್ಧರು,ಮಕ್ಕಳಿಗೆ ಅನಾರೋಗ್ಯ ಉಂಟಾದರೆ ಅವರ ಸ್ಥಿತಿ ಯಾರಿಗೂ ಹೇಳತೀರದಾಗಿದೆ.ಉತ್ತರ ಕನ್ನಡ ಜಿಲ್ಲಾಡಳಿತ ಕೂಡಲೇ ಈ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಬೇಕಿದೆ.