DISTRICT:
ವಿಶೇಷ ವರದಿ
ದಾವಣಗೆರೆ: ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ. ರಾಜಕಾರಣದಲ್ಲಿಯೂ ಬೆಣ್ಣೆನಗರಿ ಇಡೀ ರಾಜ್ಯ ಗಮನ ಸೆಳೆಯುವಂಥ ಜಿಲ್ಲೆ. ಆದ್ರೆ, ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ದೊರಕದಿರುವುದು ಜನರ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಿಂದ ಬಿಜೆಪಿಯ ಆರು ಶಾಸಕರು ಗೆದ್ದುಬಂದಿದ್ದರು. ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಗೆದ್ದಿತ್ತು. ಜೆಡಿಎಸ್ - ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಪ್ರಾತಿನಿಧ್ಯ ಸಿಗಲಿಲ್ಲ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯ ಶಾಸಕರಿಗೆ ಮಂತ್ರಿಗಿರಿ ಸಿಕ್ಕಿಲ್ಲ. ಈಗ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಿಲ್ಲೆಯ ಬಿಜೆಪಿಯ ಶಾಸಕರಿಗೆ ಮಿನಿಸ್ಟರ್ ಪಟ್ಟ ಸಿಗುತ್ತಾ ಎಂಬ ಕುತೂಹಲ ಸಹಜವಾಗಿಯೇ ಮನೆ ಮಾಡಿದೆ.
ಇನ್ನು 2006ರಿಂದ 2013ರವರೆಗೆ ಸತತ ಏಳು ವರ್ಷಗಳ ಕಾಲ ಸಚಿವರಾಗಿದ್ದ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಂ. ಪಿ. ರವೀಂದ್ರನಾಥ್ ಕಟ್ಟಾ ಆರ್ ಎಸ್ ಎಸ್ ವಾದಿ. ಜೊತೆಗೆ ಸಂಘಪರಿವಾರದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರಿಗಾದರೂ ಸಚಿವ ಸ್ಥಾನ ಸಿಗಬಹುದಾ ಎಂಬ ಮಾತು ಕೇಳಿ ಬರುತ್ತಿದೆ. ಈಗ ಅವರಿಗೆ ವಯಸ್ಸು ಜಾಸ್ತಿಯಾಗಿದ್ದು, ಈ ಅಂಶ ಬಿಟ್ಟರೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಮೊದಲಿನಿಂದಲೂ ಕಟ್ಟಾ ಆರ್ ಎಸ್ ಎಸ್ ನಲ್ಲಿ ಗುರುತಿಸಿಕೊಂಡಿರುವ ರವೀಂದ್ರನಾಥ್ ಅವರು ಬಹಿರಂಗವಾಗಿ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ಇನ್ನು ರೇಣುಕಾಚಾರ್ಯ ಮಾನಸ ಪುತ್ರ. ಹೆಚ್ಚಿನ ಅನುದಾನ ಅವರಿಗೆ ನೀಡಿದ್ದು, ಮುಂದೆ ನಮಗೂ ಸಿಗಲಿದೆ ಎಂಬ ಮಾತು ಆಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಯಡಿಯೂರಪ್ಪರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಏನೆಲ್ಲಾ ಮಾಡಿದರೂ ಸಚಿವಗಿರಿ ಸಿಗಲಿಲ್ಲ. ದೆಹಲಿಗೆ ಹೋಗಿ ಬಂದರೂ ಸಾಧ್ಯವಾಗಿಲ್ಲ. ಬಿಎಸ್ ವೈ ಬೆನ್ನಿಗೆ ನಿಂತಿದ್ದ ರೇಣುಕಾಚಾರ್ಯರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೊರೊನಾ ಸಂಕಷ್ಟದ ವೇಳೆಯಲ್ಲಿ ಮಾಡಿದ ಕೆಲಸ ಬಿಜೆಪಿಯ ಕೇಂದ್ರ ವರಿಷ್ಠರ ಗಮನಕ್ಕೂ ಹೋಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ನೀಡುವಂತೆಯೂ ಲಾಬಿ ನಡೆಸಿದ್ದಾರೆ. ರೇಣುಕಾಚಾರ್ಯ ಹಾಗೂ ರವೀಂದ್ರನಾಥ್ ಇಬ್ಬರಲ್ಲಿ ಒಬ್ಬರಿಗೆ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಇದ್ದಾರೆ.
ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪರ ಹೆಸರು ಚಾಲ್ತಿಯಲ್ಲಿದೆ. ಈಗಾಗಲೇ ಮಾಡಾಳು ವಿರೂಪಾಕ್ಷಪ್ಪ, ಜಗಳೂರು ಶಾಸಕ ಎಸ್. ವಿ. ರಾಮಚಂದ್ರ, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಲಾಗಿತ್ತು. ಇನ್ನು ಈಗ ಬಳ್ಳಾರಿ ಜಿಲ್ಲೆಯಲ್ಲಿರುವ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಅವರಿಗೆ ಮಂತ್ರಿಗಿರಿ ಕೊಟ್ಟಿರಲಿಲ್ಲ.
ಜಿಲ್ಲೆಯ 8 ಸ್ಥಾನಗಳ ಪೈಕಿ ಆರು ಸ್ಥಾನ ಗೆಲ್ಲಿಸಿದ್ದಕ್ಕೆ ಬಿಜೆಪಿ ಹೈಕಮಾಂಡ್ ಕೊಟ್ಟದ್ದು ಚೊಂಬು. ಲಿಂಗಾಯತ ಸಮುದಾಯದ ರವೀಂದ್ರನಾಥರಿಗೆ ಮಿನಿಸ್ಟರ್ ಮಾಡದೇ ಬಿಜೆಪಿ ಲಿಂಗಾಯತರನ್ನು ಕಡೆಗಣಿಸಿದೆ. ಮಧ್ಯ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಾರಿಯಾದರೂ ಬೆಣ್ಣೆ ಹಚ್ಚುವುದನ್ನು ಬಿಟ್ಟು ಜಿಲ್ಲೆಯ ಯಾರಾದರೂ ಒಬ್ಬರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.