DISTRICT:
ದಾವಣಗೆರೆ: ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಎಂದೇ ಕರೆಯುವ ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ಭೂ ಕುಸಿತ ಉಂಟಾಗಿದೆ. ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ಮಣ್ಣು ಜರಿಯಲಾರಂಭಿಸಿದ್ದು, ಆತಂಕಕ್ಕೆ ಕಾರಣವಾಗಿದೆ.
ರಸ್ತೆ ಅಗಲೀಕರಣಕ್ಕೆ ಸೂಳೆಕೆರೆಯಲ್ಲಿ ಸ್ಫೋಟ ಮಾಡಿದ್ದರಿಂದಲೇ ಭೂ ಕುಸಿತ ಉಂಟಾಗಿದೆಯಾ ಎಂಬ ಶಂಕೆ ಈಗ ಶುರುವಾಗಿದೆ. ಖಡ್ಗ ಸಂಘಟನೆಯ ಪದಾಧಿಕಾರಿಗಳು ಭೂಕುಸಿತ ಆಗಿರುವ ಸ್ಥಳ ಗುರುತಿಸಿದ್ದಾರೆ. ಅಲ್ಲಿ ಹೋಗಿ ಕುಸಿತವಾಗಿರುವ ಜಾಗ ಹಾಗೂ ಮಣ್ಣು ಕುಸಿಯುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ಸೂಳೆಕೆರೆಯಲ್ಲಿ ಬ್ಲಾಸ್ಟ್ ಮಾಡಿದಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಖಡ್ಗ ಸಂಘಟನೆ ಹಾಗೂ ಸ್ಥಳೀಯರು ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಬಳಸಿ ಬ್ಲಾಸ್ಟ್ ಮಾಡಿದ್ದರು ಎಂಬ ಆರೋಪ ಮಾಡಿದ್ದರು. ಜೊತೆಗೆ ಸೂಳೆಕೆರೆಗೆ ಅಪಾಯ ಆಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಆದ್ರೆ, ಈಗ ಮಣ್ಣು ಜರಿಯುತ್ತಿರುವುದು ಹಾಗೂ ಅಲ್ಲಲ್ಲಿ ಬಿರುಕು ಬಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಇದ್ದು, ದೇಗುಲದ ಕೆಳ ಭಾಗದಲ್ಲಿ ಭೂ ಕುಸಿತ ಆಗಿದ್ದು, ಮಣ್ಣು ನಿಧಾನವಾಗಿ ಕೆಳಗೆ ಬೀಳುತ್ತಿದೆ. ಇನ್ನು ಸಿದ್ದನಾಳಕ್ಕೆ ಸೂಳೆಕೆರೆಯಿಂದ ನೀರು ಕೊಂಡೊಯ್ಯಲು ಪೈಪ್ ಲೈನ್ ಅಳವಡಿಸಲಾಗಿದೆ. ಈ ಹಿಂದೆಯೇ ಅಳವಡಿಸಿದ್ದರೂ ಈಗ ಈ ಭಾಗದಲ್ಲಿ ಭೂ ಕುಸಿಯುತ್ತಿರುವುದರಿಂದ ಭಯ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಸೂಳೆಕೆರೆ ಸುತ್ತಮುತ್ತ ಭೂಕುಸಿತ ಉಂಟಾಗುವಷ್ಟು ಭಾರೀ ಮಳೆ ಸುರಿದಿಲ್ಲ. ಆದರೂ ಭೂಕುಸಿತವಾಗುತ್ತಿರುವುದು ಏಕೆ, ಅಧಿಕಾರಿಗಳು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸತೊಡಗಿದ್ದಾರೆ. ಸ್ಫೋಟ ಮಾಡಿದರಿಂದಾಗಿ ಈ ಅನಾಹುತಕ್ಕೆ ಪ್ರಮುಖ ಕಾರಣ ಎಂಬ ಆರೋಪ ಸ್ಥಳೀಯರದ್ದಾಗಿದೆ.
ಅಪಾಯಕ್ಕೆ ಆಹ್ವಾನ ನೀಡುವಂತೆ ಭೂಮಿ ಬಿರುಕು ಬಿಡುತ್ತಿದ್ದು, ಸೂಳೆಕೆರೆಯಲ್ಲಿ ಪರಮಾತ್ಮನ ಆಶೀರ್ವಾದದಿಂದ ಏನು ಆಗಿಲ್ಲ. ಅಪಾಯ ಆಗದ ರೀತಿಯಲ್ಲಿ ಕಾಪಾಡಿಕೊಳ್ಳಬೇಕಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಈ ಕುಸಿತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಸೂಳೆಕೆರೆ ಉಳಿಸಿ ಹೋರಾಟ ಒಕ್ಕೂಟ ಹಾಗೂ ಖಡ್ಗ ಸಂಘಟನೆಯ ಪ್ರಮುಖರು ಆಗ್ರಹಿಸಿದ್ದಾರೆ.