DISTRICT:
ದಾವಣಗೆರೆ: ಆ ಗ್ರಾಮಕ್ಕೆ ಸೇತುವೆ ಆಗಬೇಕೆಂಬುದು ಐದಕ್ಕೂ ಹೆಚ್ಚು ದಶಕಗಳ ಬೇಡಿಕೆ. ಆದ್ರೆ ಇದುವರೆಗೆ ಮುಗಿದಿಲ್ಲ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಮಳೆಗಾಲ ಯಾಕಾದ್ರೂ ಬರುತ್ತೆ ಅಂತಾ ಈ ಗ್ರಾಮದ ಜನರು ಗೊಣಗುತ್ತಾರೆ. ತಮ್ಮ ಊರಿಂದ ಬೇರೆಡೆ ತೆರಳಲು ಸಾಧ್ಯವಾಗದೇ ಪರಿತಪಿಸುತ್ತಾರೆ. ಕಳೆದ ಆರು ದಿನಗಳಿಂದ ಗ್ರಾಮಕ್ಕೆ ಜಲದಿಗ್ಬಂಧನ ಹಾಕಿದಂತಾಗಿದೆ.
ಹೌದು. ಇಂಥ ಸಂಕಷ್ಟದಲ್ಲಿರುವ ಗ್ರಾಮ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ. ಸುಮಾರು ಮೂರು ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳ ಗ್ರಾಮ. ಚಿಕ್ಕಬಿದರೆ - ಸಾರಥಿ ಮಧ್ಯೆ ಸಂಪರ್ಕ್ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ. ವಾರದಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ತೀವ್ರಗೊಂಡಿದೆ. ಪರಿಣಾಮ ಕೆರೆ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆ ಮೇಲೆಲ್ಲಾ ನೀರು ಹರಿದು ಬಂದ ಕಾರಣ ಸವಾರರ ಪರದಾಟ ಹೆಚ್ಚಿದೆ.
ಚಿಕ್ಕಬಿದರಿ ಗ್ರಾಮ ಹಾಗೂ ಸಾರಥಿ ಮಧ್ಯದ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಚಿಕ್ಕಬಿದರಿ ಗ್ರಾಮ ಸಂಪೂರ್ಣವಾಗಿ ದ್ವೀಪವಾದಂತಾಗಿದೆ. ಯಾವುದೇ ವಾಹನ ಬರೋಕೆ ಸಣ್ಣ ರಸ್ತೆಯೂ ಇಲ್ಲದಂತಾಗಿದೆ. ಸದ್ಯ ಚಿಕ್ಕಬಿದರಿ ಸಾರಥಿ ಗ್ರಾಮಗಳ ಮಧ್ಯೆ ೭ ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಸೇತುವೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತಿದ್ದು, ಇದರಿಂದ ಸೇತುವೆ ಕಾಮಾಗಾರಿಗೆ ನಿರ್ಮಿಸಿದ್ದು ಕಾಲಂಗಳು ಕೂಡ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿವೆ.
ಇನ್ನೂ ಚಿಕ್ಕಬಿದರಿ ಗ್ರಾಮದಿಂದ ದಾವಣಗೆರೆ, ಹರಿಹರಕ್ಕೆ ಹೋಗಲು ದುಗ್ಗಾವತಿಯ ರಸ್ತೆಯಿದ್ದು, ಈ ರಸ್ತೆಯೂ ಸಂಪೂರ್ಣವಾಗಿ ಮಳೆಯಿಂದ ಜಲಾವೃತವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಈ ಗ್ರಾಮಕ್ಕೆ ಸೇತುವೆ ನಿರ್ಮಿಸಿ ಕೊಡಬೇಕೆಂಬುದು ಗ್ರಾಮಸ್ಥರ ಬೇಡಿಕೆ. ಆ ಬಳಿಕ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರದ ಬಳಿ ಮನವಿ ಮಾಡಿಕೊಂಡರೂ ಈ ಗ್ರಾಮದಲ್ಲಿ ಸೇತುವೆ ಕಾಮಗಾರಿ ಆಗಲೇ ಇಲ್ಲ.
ಈ ಕಾರಣದಿಂದ ಈ ಊರಿಗೆ ಸರ್ಕಾರಿ ಬಸ್ ಗಳಾಗಲಿ ಆ್ಯಂಬುಲೆನ್ಸ್ ಗಳಾಗಲಿ ಕೂಡ ಬರಲ್ಲ. ಹತ್ತು ವರ್ಷದಿಂದ ಜನಪ್ರತಿನಿಧಿಗಳು ಇಲ್ಲಿಗೆ ಬರುತ್ತಾರೆ, ನೋಡ್ತಾರೆ, ಹೋಗುತ್ತಾರೆ ಅಷ್ಟೇ. ಆದರೆ ಕಾಮಗಾರಿ ಮಾತ್ರ ಆಗ್ತಿಲ್ಲ. ಇದರಿಂದ ಈ ರಸ್ತೆಯ ಮೂಲಕ ಹೋಗುವ ಜನರು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತಿದ್ದಾರೆ.