DISTRICT: ಬಾಗಲಕೋಟೆ: ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಮುಧೋಳ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಶೀಘ್ರ ಆರಂಭಿಸುವಂತೆ ಆಗ್ರಹಿಸಿ ಜುಲೈ 16ರಂದು ಮುಧೋಳ ನಗರದಲ್ಲಿ ರೈತರು ವಿವಿಧ ಬೇಡಿಕೆಗಳೊಂದಿಗೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡರು ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತರು, ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ ಪ್ರಾರಂಭವಾಗಬೇಕು ಎಂದು ಒತ್ತಾಯಿಸಿದ್ದಾರೆ. ಕಾರ್ಖಾನೆಯಲ್ಲಿ ಕಾರ್ಯ ನಿರ್ವಾಹಿಸುವ ಕಾರ್ಮಿಕರಿಗೆ 6 ವೇತನ ಶ್ರೇಣಿಯಲ್ಲಿ ಸಂಬಳ, ಕಾರ್ಖಾನೆಯು ಸ್ಥಗಿತವಾಗಿರುವ ಅವಧಿಯ ವೇತನವನ್ನೂ ನೀಡಬೇಕು. ಕಾರ್ಖಾನೆಗೆ ಸರ್ಕಾರವು ಸಹಾಯ ಧನವನ್ನು ಒದಗಿಸಿ, ಸಹಕಾರಿ ರಂಗದಲ್ಲಿ ಕಾರ್ಖಾನೆ ಮುಂದುವರಿಯುವಂತೆ ಮಾಡಬೇಕು. ಸರ್ಕಾರವು ಈಗಿರುವ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ, ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಹೊಸ ಆಡಳಿತ ಮಂಡಳಿ ರಚನೆಗೆ ಅವಕಾಶ ಕಲ್ಪಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ರೈತರು ಮತ್ತು ಕಾರ್ಮಿಕರ ಮೇಲೆ ಮಾಡಿರುವ 62 ಕೋಟಿ ರೂಪಾಯಿ ಸಾಲವನ್ನು ಕಾರ್ಖಾನೆಯ ಅಧ್ಯಕ್ಷರ ಆಸ್ತಿ ಜಪ್ತಿ ಮಾಡಿ ಸಾಲ ಮರುಪಾವತಿ ಮಾಡಬೇಕು.ಕಾರ್ಖಾನೆಯಲ್ಲಿ ನಡೆದಿರುವ ಎಲ್ಲ ಅವ್ಯವಹಾರಗಳ ಬಗ್ಗೆ ತನಿಖೆಗಾಗಿ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಬೇಕು. ಗೋದಾಮಿನಲ್ಲಿ 5 ರಿಂದ 6 ಕೋಟಿ ರೂಪಾಯಿ ಮೌಲ್ಯದ ಸಕ್ಕರೆ ದಾಸ್ತಾನು ಇದೆ. ಸಕ್ಕರೆಯನ್ನು ಮಾರಾಟ ಮಾಡದೆ ಇದ್ದರೆ ಸಕ್ಕರೆಯ ಗುಣಮಟ್ಟ ಕಳಪೆಯಾಗಿ ನಾಶವಾಗುತ್ತದೆ. ಈ ಸಕ್ಕರೆಯನ್ನು ಮಾರಾಟ ಮಾಡಲು ಕಾರ್ಖಾನೆಯ ವ್ಯವಸ್ಥಾಪಕರು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಾರ್ಖಾನೆ ಸ್ಥಗಿತಗೊಂಡಿರುವುದರ ಹಿಂದೆ ಖಾಸಗಿ ಸಕ್ಕರೆ ಕಾರ್ಖಾನೆಗಳ ಕೈವಾಡ ಇದೆ. ಸರ್ಕಾರವು ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ರೈತರು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತರಾದ ಗೋವಿಂದಪ್ಪ ಮೆಟಗುಡ್ಡ,ಬಸಪ್ಪ ಸಂಗನ್ನವರ ಸೋಮಲಿಂಗ ಮದರಖಂಡಿ, ಸೋಮಪ್ಪ ಲಕ್ಷಾಣಿ ಮತ್ತು ಯಲ್ಲಪ್ಪ ಹೆಗಡೆ ಇದ್ದರು.