DISTRICT:
ದೇವನಹಳ್ಳಿ : ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನಿರಂತರ ಹೇಳಿಕೆಗಳನ್ನು ನೀಡುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ದೊಡ್ಡಬಳ್ಳಾಪುರ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಂಡಿದೆ.
ರಾಜಕೀಯವಾಗಿ ಸ್ಥಳೀಯ ಮಟ್ಟದಲ್ಲಿಯೂ ಬದ್ದ ವೈರಿಗಳು ಎಂಬಂತೆ ಸೆಣಸಾಡುತ್ತಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಗರಸಭೆ ಆಡಳಿತಕ್ಕಾಗಿ ಎರಡೂ ಪಕ್ಷಗಳು ಒಂದಾಗಿ ಅಧಿಕಾರದ ಚುಕ್ಕಾಣಿ ಹಿಡಿದಿವೆ.
ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಜೊತೆ ಮೈತ್ರಿಗೆ ಆಸಕ್ತಿ ತೋರಿಸದ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡಿದ್ದು, ಬಿಜೆಪಿಯ ಸುಧಾರಾಣಿ ಲಕ್ಷ್ಮೀನಾರಾಯಣ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
ದೊಡ್ಡಬಳ್ಳಾಪುರ ನಗರಸಭೆಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆದು ಸೆಪ್ಟೆಂಬರ್ 6 ರಂದು ಮತ ಎಣಿಕೆ ಕಾರ್ಯ ನಡೆದು ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ, ಬಿಜೆಪಿ - 12, ಕಾಂಗ್ರೆಸ್ -9, ಜೆಡಿಎಸ್-7, ಪಕ್ಷೇತರರು -3 ಸ್ಥಾನಗಳನ್ನ ಪಡೆದಿದ್ದರು, ಅತಂತ್ರ ನಗರಸಭೆಯಾದ ಹಿನ್ನಲೆಯಲ್ಲಿ ಯಾವ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಸಿಗುತ್ತೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿತ್ತು ಅಕ್ಟೋಬರ್ 26 ರಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡಿದ್ದರಿಂದ ಬಿಜೆಪಿಯ ಸುಧಾರಾಣಿ ಲಕ್ಷ್ಮಿನಾರಾಯಣ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಜೆಡಿಎಸ್ ಪಕ್ಷದ ಫರ್ಹನಾ ತಾಜ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಗರಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುಧಾರಾಣಿ ಅವರಿಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಇಬ್ಬರು ಪಕ್ಷೇತರರು, ಒಬ್ಬರು ಸಂಸದರು ಮತ ಸೇರಿ 22 ಮತಗಳು ಬಂದ ಅಧ್ಯಕ್ಷರಾಗಿ ಜಯಗಳಿಸಿದರು.
ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್ ನಾಗವೇಣಿ ಪರ ಕಾಂಗ್ರೆಸ್ 9 ಸದಸ್ಯರು, ಒಬ್ಬ ಪಕ್ಷೇತರರು, ಶಾಸಕರ ಮತ ಸೇರಿ 11 ಮತ ಪಡೆದು ಸೋಲನುಭವಿಸಿದರು. ಜೆಡಿಎಸ್‌ನಿಂದ ಉಪಾದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪರ್ಹಾನಾ ತಾಜ್‌ಗೆ 22 ಮತಗಳು ಲಭಿಸಿ ಜಯಗಳಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಅಧಿಕಾರವಾಧಿಯನ್ನ 30 ತಿಂಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.