DISTRICT: ಕಾರವಾರ : ಮೀನುಗಾರಿಕಾ ಋತುವಿನ ಅಂತಿಮ ಘಟ್ಟದಲ್ಲಿ ಹೊಡೆತ ಬಿದ್ದಿರುವಾಗಲೇ ಇದೀಗ ಜೂನ್ ಒಂದರಿಂದ ಎರಡು ತಿಂಗಳುಗಳ ಕಾಲ ಮೀನುಗಾರಿಕೆ ನಿಷೇಧ ಎದುರಾಗಿದೆ. ಸರಕಾರ ಜೂನ್ ಒಂದರಿಂದ ಎರಡು ತಿಂಗಳುಗಳ ಕಾಲ ಮೀನುಗಾರಿಕೆಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಕಡಲ ಮಕ್ಕಳು ಎಲ್ಲಾ ರೀತಿಯ ಮೀನುಗಾರಿಕೆಯನ್ನು ಜೂನ್ ಒಂದರಿಂದ ಸ್ಥಗಿತಗೊಳಿಸಬೇಕಿದೆ. ಕೊರೋನಾ ಲಾಕ್ ಡೌನ್ ಮತ್ತು ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಈ ಬಾರಿಯೂ ಮೀನುಗಾರಿಕೆಯ ಉದ್ಯಮ ನಲುಗಿ ಹೋಗಿದೆ. ರಾಜ್ಯ ಸರಕಾರದ ಅಧಿಸೂಚನೆ ಪ್ರಕಾರ, ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆಯಂತೆ ಕರ್ನಾಟಕದ ಕರಾವಳಿಯಲ್ಲಿ ಯಾವುದೇ ಬಲೆ ಬಳಸುವಂತಿಲ್ಲ. ಯಾಂತ್ರೀಕೃತ ಬೋಟ್ ಅಥವಾ ಯಾವುದೇ ಬೋಟ್ ಗಳನ್ನು ಸಮುದ್ರಕ್ಕೆ ಇಳಿಸುವಂತಿಲ್ಲ. ಜೂನ್ ಒಂದರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ಕಾಲ ನಿಷೇಧ ಹೇರಲಾಗಿದ್ದು,ರಾಜ್ಯ ಸರಕಾರದ ನಿಯಮ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದರೆ ದಂಡ ಸೇರಿದಂತೆ ಒಂದು ವರ್ಷದ ಡಿಸೇಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ ಎಂದು ಮೀನುಗಾರಿಕಾ ಇಲಾಖೆಯು ಪ್ರಕಟಣೆ ಹೊರಡಿಸಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಮೀನುಗಳ ಸಂತಾನಾಭಿವೃದ್ಧಿಯ ಸಮಯ ಎಂಬ ನೆಲೆಯಲ್ಲಿ ಎರಡು ತಿಂಗಳುಗಳ ಕಾಲ ಮೀನುಗಾರಿಕೆಗೆ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶ ಮಾಡುತ್ತದೆ. ಮೀನುಗಳ ಸಂತತಿ ಹೆಚ್ಚುವುದಕ್ಕೆ ಇದು ಪೂರಕ ಎನ್ನಲಾಗುತ್ತದೆ.