DISTRICT: ಕಲಬುರಗಿ: ಹೆಮ್ಮಾರಿ ಕೊರೊನಾ ಎರಡನೇ ಅಲೆ ಕಟ್ಟಿಹಾಕಲು ಹಗಲಿರುಳು ಶ್ರಮಿಸಿ ಯಶಸ್ವಿಯಾಗಿರುವ ಕಲಬುರಗಿ ಜಿಲ್ಲಾಡಳಿತಕ್ಕೆ ಇದೀಗ ಪ್ರವಾಹ ಟೆನ್ಛನ್ ಶುರುವಾಗಿದೆ. ನೆರೆ ಉಂಟಾದ್ರೆ ಪರಿಸ್ಥಿತಿ ಎದುರಿಸಿ ಜನರ ರಕ್ಷಣೆ ಮಾಡಲು ಜಿಲ್ಲಾಡಳಿತ ಪರ್ಫೆಕ್ಟ್ ಪ್ಲ್ಯಾನ್ ಮಾಡುತ್ತಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸ್ತಿರೋದ್ರಿಂದ ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಪ್ರವಾಹ ಸನ್ನದ್ದವಾಗಿ ಎದುರಿಸಲು ಜಿಲ್ಲಾಡಳಿತ ಪ್ಲ್ಯಾನ್ ಮಾಡಿಕೊಂಡು ಸ್ಥಳೀಯ ಯುವಕರಿಗೆ ರಕ್ಷಣಾ ತರಬೇತಿ, ಜೊತೆಗೆ ಟ್ರೈಯಲ್ ಪ್ರಾಕ್ಟೀಸ್ ಮಾಡಿಸುತ್ತಿದೆ. ಪ್ರವಾಹ ಸಂದರ್ಭದಲ್ಲಿ ಸಂತ್ರಸ್ಥರ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕಾರ್ಯಚರಣೆಯ ಬಗ್ಗೆ ಸ್ಥಳಿಯ ಯುವಕರಿಗೆ NDRF ಟೀಂ ತರಬೇತಿ ನೀಡುತ್ತಿದೆ. ವಿಜಯವಾಡದಿಂದ ಆಗಮಿಸಿರುವ ನಾಲ್ವರನ್ನೊಳಗೊಂಡ ಎನ್.ಡಿ.ಆರ್.ಎಫ್ ಟೀಂ, SDRF ನ 45 ಜನ ಹಾಗೂ ಹೋಂ ಗಾರ್ಡ್ ನ 30 ಸಿಬ್ಬಂದಿಗಳಿಗೆ ಹಾಗೂ ಇಚ್ಚೆವುಳ್ಳ ಯುವಕರಿಗೆ ರಕ್ಷಣಾ ಕಾರ್ಯಾಚರಣೆಯ ತರಬೇತಿ ನೀಡಲಾಗುತ್ತಿದೆ. ಕಲಬುರಗಿಯ ಶರಣಬಸವೇಶ್ವರ ಅಪ್ಪಾ ಕೆರೆಯಲ್ಲಿ ತರಬೇತಿ ನೀಡಲಾಗುತ್ತಿದ್ದು, ರಕ್ಷಣೆಯ ಅಣಕು ಕಾರ್ಯಾಚರಣೆ ಸಹ ನಡೆಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು ಚಿಂಚೋಳಿ ತಾಲ್ಲೂಕಿನ ಮುಲ್ಲಾಮಾರಿ ಜಲಾಶಯ ಮತ್ತು ಕಮಲಾಪುರ ತಾಲ್ಲೂಕಿನ ಬೆಣ್ಣೆತೋರಾ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಮುಲ್ಲಾಮಾರಿ ಜಲಾಶಾಯದಿಂದ ಈಗಾಗಲೆ 300 ಕ್ಯೂಸೆಕ್ಸ್ ನೀರು ಕಾಗಿನಾ ನದಿಗೆ ಬಿಟ್ಟಿರುವುದರಿಂದ ನದಿ ಪಾತ್ರದ ಗ್ರಾಮಗಳಾದ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ದೇಗಲಮಡಿ, ಚಿಂಚೋಳಿ, ಅನವಾರ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಜನರು ನದಿಯಲ್ಲಿ ಮೀನು ಹಿಡಿಯಲು, ಬಟ್ಟೆ ಒಗೆಯಲು, ಜಾನುವಾರುಗಳಿಗೆ ನೀರು ಕುಡಿಸಲು ಹೋಗಬಾರದೆಂದು ನೀರಾವರಿ ಇಲಾಖೆ ಎಚ್ಚರಿಕೆ ನೀಡಿದೆ. ವೀರ್ ಜಲಾಶಯ ಹಾಗೂ ಉಜ್ಜನಿ ಜಲಾಶಯದಿಂದಲೂ ಭೀಮಾ ನದಿಗೆ ನೀರು ಹರಿಬಿಎಲಾಗುತ್ತಿದ್ದು, ಯಾವ ಸಂದರ್ಭದಲ್ಲಾದರೂ ಪ್ರವಾಹ ಎದುರಾಗೋ ಸಾಧ್ಯತೆ ಇದೆ. ಕಳೆದ ಬಾರಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಆತಂಕಕ್ಕೊಳಗಾಗಿ ಜಿಲ್ಲಾಢಳಿತ ಎನ್‌ಡಿಆರ್‌ಎಫ್ ತಂಡ ಬರುವ ಮುನ್ನವೇ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರವಾಹದಲ್ಲಿ ಸಿಲುಕೊಂಡ ಜನರ ರಕ್ಷಣೆ ಮಾಡುವ ಬಗ್ಗೆ ತರಬೇತಿ ನೀಡುತ್ತಿದೆ. ಒಟ್ಟಿನಲ್ಲಿ ಯುದ್ದಕಾಲ ಶಸ್ತ್ರಾಭ್ಯಾಸ ಎನ್ನುವ ಬದಲು ಕಲಬುರಗಿ ಜಿಲ್ಲಾಡಳಿತ ಪ್ರವಾಹ ಉಂಟಾಗುವ ಮುನ್ನವೇ ಮುಂಜಾಗ್ರತವಾಗಿ ಪ್ರವಾಹ ಎದುರಿಸಲು ಸಕಲ ಸಿದ್ದತೆಗಳೊಂದಿಗೆ ಸಜ್ಜಾಗುತ್ತಿದೆ.