DISTRICT:
ಹಾಸನ: ಅರಸಿಕೆರೆ ನಗರಸಭೆಯ ಜೆಡಿಎಸ್ ಸದಸ್ಯರುಗಳಿಗೆ ಬಿಜೆಪಿ ಹಣದ ಆಮಿಷವೊಡ್ಡಿದೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ವಾರ್ಡ್ನ ನಗರಸಭೆ ಸದಸ್ಯೆ ಕಲೈರಸಿಗೆ 10 ಲಕ್ಷ ಹಣವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ನೀಡಿದ್ದಾರೆ. ಈಗ 10 ಲಕ್ಷ ಕೊಟ್ಟಿದ್ದಾರೆ. ಬಂದ ನಂತರ 15 ಲಕ್ಷ ಕೊಡುತ್ತೇವೆ ಎಂದು ಸಂತೋಷ್ ಹೇಳಿದ್ದಾರೆ. ಇದರ ಹಿಂದೆ ಸಿಎಂ ಕೈವಾಡವೂ ಇರಬಹುದು. ಹಾಗಾಗಿ ಇದರ ತನಿಖೆಯನ್ನು ಸಿಬಿಐ ಗೆ ವಹಿಸುವಂತೆ ಒತ್ತಾಯಿಸಿದರು.
4-5 ತಿಂಗಳಿನಿಂದ ಜೆಡಿಎಸ್ ಸದಸ್ಯರಿಗೆ ಧಮ್ಕಿ ಹಾಕಲಾಗುತ್ತಿದೆ. ಬಿಜೆಪಿ ಸೇರದಿದ್ದರೆ ನಿಮ್ಮನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಇಲ್ಲ, ಅಧಿಕಾರಕ್ಕಾಗಿ ಏನೂ ಬೇಕಾದರೂ ಮಾಡುತ್ತಾರೆ ಎಂದು ದೂರಿದರು.
ಅರಸಿಕೆರೆ ಪುರಸಭೆಯಲ್ಲಿ ಮೆಜಾರಿಟಿ ಪಡೆದುಕೊಳ್ಳಬೇಕು ಎಂದು ನಮ್ಮ ಪಕ್ಷದ ನಾಯಕರಿಗೆ ಹಣದ ಆಮಿಷವೊಡ್ಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಬರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಬೆಂಬಲಿಗರು ಹಣವನ್ನ ನೀಡಿ ಹೋಗಿದ್ದಾರೆ ಎಂದು ಆರೋಪಿಸಿದರು.