DISTRICT:
ದಾವಣಗೆರೆ: ಇತಿಹಾಸ ಪ್ರಸಿದ್ಧ ತೀರ್ಥರಾಮೇಶ್ವರ ದೇಗುಲದಲ್ಲಿ ಈಗ ಸಣ್ಣ ಜಲಪಾತವೇ ಸೃಷ್ಟಿಯಾಗಿದ್ದು, ವೈಭವ ಕಣ್ತುಂಬಿಕೊಳ್ಳಲು ಜನರು ಬರತೊಡಗಿದ್ದಾರೆ.
ನ್ಯಾಮತಿ ತಾಲೂಕಿನ ಬೆಳಗುತ್ತಿ ಸಮೀಪವಿರುವ ತೀರ್ಥರಾಮೇಶ್ವರ ದೇಗುಲ ಭಕ್ತರ ಪಾಲಿನ ಆರಾಧ್ಯ ಕೇಂದ್ರ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದೇಗುಲಕ್ಕೆ ಹೊಸ ಕಳೆ ಬಂದಿದ್ದು, ಮಿನಿ ಫಾಲ್ಸ್ ನಂತೆ ನೀರು ಹರಿಯುತ್ತಿದೆ. ಈ ವಿಹಂಗಮ ನೋಟಕ್ಕೆ ಜನರು ಫಿದಾ ಆಗಿದ್ದಾರೆ.
ಬಯಲುಸೀಮೆ ಪ್ರದೇಶದ ಮಧ್ಯದಲ್ಲಿರುವ ಪ್ರವಾಸಿ ಕೇಂದ್ರ ತೀರ್ಥರಾಮೇಶ್ವರ. ಈಗ ನೀರಿನಿಂದ ತುಂಬಿ ತುಳುಕುತ್ತಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಪ್ರಾಕೃತಿಕ ಸೌಂದರ್ಯದ ಮಧ್ಯೆ ನೆಲೆಸಿರುವ ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂತಲೂ ಸಹ ಸ್ಥಳೀಯವಾಗಿ ಕರೆಯಲಾಗುತ್ತದೆ. ಬೆಳಗುತ್ತಿ ಎಂಬ ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿರುವ ಬೆಟ್ಟವೊಂದರ ಮೇಲೆ ತೀರ್ಥರಾಮೇಶ್ವರ ದೇವಸ್ಥಾನವಿದೆ. ಬೆಟ್ಟದ ಮಧ್ಯದಿಂದ ನೀರು ಹರಿದು ಬರುತ್ತಿದ್ದು, ಥೇಟ್ ಮಲೆನಾಡಿನಲ್ಲಿ ಇದ್ದ ಅನುಭವ ಇಲ್ಲಿ ಆಗುತ್ತಿದೆ.
ವರ್ಷ ಪೂರ್ತಿ ಇಲ್ಲಿ ನೀರು ಹರಿಯುತ್ತಿದ್ದು, ನೀರು ಎಂದಿಗೂ ಬತ್ತುವುದಿಲ್ಲ. ಈ ನೀರಿನಲ್ಲಿ ಮಿಂದರೆ ಸಕಲ ದೋಷಗಳು, ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದ್ದು, ಇದರ ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದ ಕಲ್ಯಾಣಿಯ ನೀರನ್ನು ಬಿಂದಿಗೆಗಳಲ್ಲಿ ತೆಗೆದುಕೊಂಡು ಬೇರೆಡೆ ಹೋಗಿ ಭಕ್ತಾದಿಗಳು ಸ್ನಾನ ಮಾಡುತ್ತಾರೆ.
ಹದಿನೈದು ಕಿ.ಮೀ. ದೂರದ ಬೆಟ್ಟದ ತಪ್ಪಲಿನ ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡ ತೀರ್ಥರಾಮೇಶ್ವರ ದೇವಸ್ಥಾನ, ಇಲ್ಲಿನ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳವಾಗಿವೆ. ಸುತ್ತಲೂ ಗುಡ್ಡ ಇದ್ದು, ಹಚ್ಚಹಸಿರಿನ ವಾತಾವರಣ ಇಲ್ಲಿದೆ. ತೀರ್ಥ ರಾಮೇಶ್ವರದ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ನಿರಂತರ ತೀರ್ಥ ರೂಪದ ನೀರು ಹರಿಯುತ್ತದೆ. ಮಳೆ ಬರಲಿ, ಬಿಡಲಿ ವರ್ಷದ 365 ದಿನಗಳೂ ಹರಿಯುತ್ತದೆ. ಎಲ್ಲಿಂದಲೋ ಹರಿದು ಬರುವ ಈ ನೀರು ಅತ್ಯಂತ ಪವಿತ್ರ. ಈ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಸ್ವೀಕರಿಸಿದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಆದ್ದರಿಂದಲೇ ಈ ಸನ್ನಿ ಧಾನ ತೀರ್ಥ ರಾಮೇಶ್ವರ ಎಂದು ಖ್ಯಾತಿ ಪಡೆದಿದೆ.
ಈಗ ಪ್ರವಾಸಿ ತಾಣವೂ ಎಂಬಂತಾಗಿದ್ದು, ಜಲಲ ಜಲಧಾರೆಯಲ್ಲಿ ಮಿಂದೇಳಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಮಳೆಯ ಜೊತೆಗೆ ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ.