DISTRICT:
ಧಾರವಾಡ: ರೈತನೊಬ್ಬ ಸದಾ ತನ್ನ ಕೃಷಿ ಕಾರ್ಯದಲ್ಲಿ ಜೊತೆಯಾಗಿ ದುಡಿಯುತ್ತಾ ಬಂದಿರುವ ಎತ್ತಿಗೆ, ತನ್ನ ಮನೆ ಮಗನ ಸ್ಥಾನ ನೀಡಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.
ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದ ರೈತ ನಾಗಪ್ಪ ಎಂಬುವವರು, ಮನೆಯಲ್ಲಿ ಸುಮಾರು 13 ವರ್ಷಗಳ ಕಾಲ ಈ ಮೈಲಾರಿ ಹೆಸರಿನ ಎತ್ತು ದುಡಿಯುತ್ತಾ ಬಂದಿತ್ತು. ಪ್ರೀತಿಯ ಎತ್ತಿಗೆ, ವಿಶೇಷ ಅಲಕಾಂರ ಮಾಡಿ, ಮನೆಯ ಮುಂದೆ ಫೆಂಡಾಲ್ ಹಾಕಿ, ಸುಮಾರು ಐದು ಕೆಜಿ ಕೇಕ್ ಮಾಡಿಸಿ, ಮನೆಯ ಮುಂದೆ ರಂಗೋಲಿಯನ್ನು ಬೀಡಿಸಿ, ಸಂಭ್ರಮದಿಂದ ಬರ್ಥಡೇ ಆಚರಿಸಿದ್ದಾರೆ.
2018ರಲ್ಲಿ ಬೆಳೆ ಹಾನಿ, ಮನೆಯಲ್ಲಿ ಕಷ್ಟಗಳ ಸರಮಾಲೆಯಿಂದ ರೈತ ನಾಗಪ್ಪ ಈ ಎತ್ತನ್ನು ಧಾರವಾಡದ ಕೆಲಗೇರಿಯ ರೈತನಿಗೆ ಮಾರಾಟ ಮಾಡಿದರು. ಆದರೆ ಕೆಲವು ತಿಂಗಳ ಬಳಿಕ ಮೈಲಾರಿ ಎತ್ತನ್ನು ಆ ರೈತ ಕಟುಕರಿಗೆ ಮಾರಾಟ ಮಾಡಿದ್ದಾನೆ. ಮುಂದೊಂದು ದಿನ ಬೇರೆ ಎತ್ತುಗಳ ಖರೀದಿಗೆ ಮಾಲೀಕ ನಾಗಪ್ಪ ಹೋದಾಗ ಈ ಎತ್ತು ಕೂಗಿ ಕೂಗಿ ಕರೆದಿದೆ. ಆಗ ನಾಗಪ್ಪ ಈ ಎತ್ತನ್ನು ಮತ್ತೆ 52 ಸಾವಿರ ರೂ. ಸಾಲ ಮಾಡಿ ಖರೀದಿಸಿ ಮನೆ ತುಂಬಿಸಿಕೊಂಡು ಊರಿನ ಜನಕ್ಕೆ ಊಟ ಹಾಕಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಮನೆಯ ಏಳ್ಗೆಗಾಗಿ ದುಡಿದ ಎತ್ತುಗಳನ್ನು ಈಗಲೂ ಗ್ರಾಮೀಣ ಭಾಗದಲ್ಲಿ ತಮ್ಮ ಮನೆಯ ಸದಸ್ಯರಂತೆ ಗೌರವಿಸುವ ಸಂಪ್ರದಾಯ ಇಂದಿಗೂ ಜೀವಂತವಾಗಿದ್ದು, ಅದು ಈಗ ನಾಗಪ್ಪಅವರ ಕಾರ್ಯದಿಂದ ಮತ್ತೆ ಸಾಬೀತಾಗಿದೆ. ನಾಗಪ್ಪನವರ ಎತ್ತಿನ ಮೇಲಿನ ಪ್ರೀತಯು ಉಳಿದ ರೈತರಿಗೂ ಮಾದರಿ.