DISTRICT:
73ನೇ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಏರ್ಫೋರ್ಸ್ ರೆಜಿಮೆಂಟ್ ಮುನ್ನಡೆಸಿದ ಮೊದಲ ಮಹಿಳಾ ವೈದ್ಯೆ ಎಂಬ ಕೀರ್ತಿಗೆ ತುಮಕೂರು ಮೂಲದ ಇಂಪನಾಶ್ರೀ ಪಾತ್ರರಾಗಿದ್ದಾರೆ. ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ಯಲ್ಲರಾಜು ಹಾಗೂ ಕೆಎಸ್ ಭಾನುಮತಿ ದಂಪತಿಯ ಪುತ್ರಿ ಇಂಪನಾಶ್ರೀ ಇದೀಗ ಇಂತದ್ದೊಂದು ಕೀರ್ತಿಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನ ಏರ್ ಕಮಾಂಡರ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಇಂಪನಾಶ್ರೀ ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ರಾಜಪಥದಲ್ಲಿ 3.3 ಕಿಲೋ ಮೀಟರ್ ಏರ್ಪೋರ್ಸ್ ರೆಜಿಮೆಂಟನ್ನು ಪಥಸಂಚಲನದಲ್ಲಿ ನಡೆಸಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ತುಮಕೂರಿನ ಸರ್ವೋದಯ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಇಂಪನಾಶ್ರೀ ಈ ವೇಳೆ ಅಲ್ಲಿಯೇ ಎನ್ಸಿಸಿಗೆ ಸೇರ್ಪಡೆಯಾದರು. ಸತತ ಪರಿಶ್ರಮದಿಂದ 2012ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಎನ್ಸಿಸಿ ಕೋಟಾದಡಿ ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಇಂಪನಾಶ್ರೀಗೆ ಸೀಟು ಪಡೆದುಕೊಂಡರು. ಬಳಿಕ 2021ಮೇ ನಲ್ಲಿ ಬೆಂಗಳೂರಿನ ಏರ್ ಕಮಾಂಡರ್ ಆಸ್ಪತ್ರೆಯಲ್ಲಿ ವೈದ್ಯಯಾಗಿ ಆಯ್ಕೆಯಾದರು.
2012ರ ಪರೇಡ್ನಲ್ಲಿ 4ನೇ ಬೆಟಾಲಿಯನ್ ಎನ್ಸಿಸಿ ಕೆಡೆಟ್ ಆಗಿ ಭಾಗವಹಿಸಿದ್ದ ಇಂಪನಾಶ್ರೀಗೆ ಗಣರಾಜ್ಯೋತ್ಸವದಂದು ವಾಯುಪಡೆ ರೆಜಿಮೆಂಟ್ ಮುನ್ನಡೆಸುವ ಅವಕಾಶ ಸಿಕ್ಕಿತ್ತು.