DISTRICT:
ಕಾರವಾರ : ಮಲೆನಾಡಿಗರ ಬಾಯಲ್ಲಿ ನೀರೂರಿಸುತ್ತಿರುವ ಅಪ್ಪೆಮಿಡಿಗೆ ಈಗ ಭಾರತೀಯ ಅಂಚೆ ಇಲಾಖೆಯ ಮಾನ್ಯತೆ ಲಭಿಸಿದೆ. ಅಂಚೆ ಲಕೋಟೆ ಮೇಲೆ ಅಪ್ಪೆಮಿಡಿಯ ಭಾವಚಿತ್ರ ಪ್ರಕಟಿಸಲಾಗಿದೆ. ಮಂಗಳವಾರ ಈ ವಿಶೇಷ ಅಂಚೆ ಲಕೋಟೆಯನ್ನು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಲಾಯಿತು.
ಕೇಂದ್ರ ಸರ್ಕಾರದ ಭೌಗೋಳಿಕ ಗುರುತಿಸುವಿಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಪ್ಪೆಮಿಡಿ ಇನ್ಮುಂದೆ ಅಂಚೆ ಇಲಾಖೆ ಲಕೋಟೆ ಮೇಲೆ ಕಾಣಿಸಲಿದೆ.ಪೋಸ್ಟ್ ಕವರ್ ಮೇಲೆ ಅಪ್ಪೆ ಮಿಡಿಯ ಭಾವಚಿತ್ರ ಪ್ರಕಟಿಸಲಾಗಿದೆ. ಲಕೋಟೆಯ ಹಿಂಭಾಗದಲ್ಲಿ ಅಪ್ಪೆ ಮಿಡಿಯ ವಿಶೇಷತೆ ಕುರಿತು ಮಾಹಿತಿ ಪ್ರಕಟವಾಗಿದೆ. ಅಲ್ಲದೆ ಅಪ್ಪೆಮಿಡಿ ಸಂರಕ್ಷಣೆ ಮಾಡುತ್ತಿರುವ ಸಾಗರದ ಕಾಕಲ್ ಇಂಡಸ್ಟ್ರೀಯ ವಿಳಾಸವನ್ನೂ ಪ್ರಕಟಿಸಲಾಗಿದೆ.
ಏನಿದು ಅಪ್ಪೆಮಿಡಿ:
ಮಲೆನಾಡಿಗರಿಗೆ ಚಿರಪರಿಚಿತ ಹಾಗೂ ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರೂರಿಸುವ ಅಪ್ಪೆ ಮಿಡಿ ಪಶ್ಚಿಮ ಘಟ್ಟದ ಭೌಗೋಳಿಕ ಪ್ರದೇಶದಲ್ಲಿ ಮಾತ್ರ ತನ್ನ ಅಸ್ತಿತ್ವ ಗಟ್ಟಿಯಾಗಿಸಿಕೊಂಡಿದೆ. ಇದರ ಮಿಡಿಯನ್ನು ಉಪ್ಪಿನಕಾಯಿಗೆ ಬಳಸಲಾಗುತ್ತದೆ. ಅತೀ ಪರಿಮಳ, ಬಹು ಕಾಲ ಕೆಡದೇ ಇರುವ ಉಪ್ಪಿನಕಾಯಿಗೆ ಬಳಸುವ ಈ ಮಾವಿನ ಮಿಡಿ ಮಲೆನಾಡು ಭಾಗದಲ್ಲಿ ವಿಶೇಷ. ಅಪ್ಪೆ ಮಿಡಿಯಲ್ಲಿ ಸುಮಾರು 90 ತಳಿಗಳನ್ನು ಈವರೆಗೆ ಗುರುತಿಸಲಾಗಿದೆ.
ಭಾರತ ಸರ್ಕಾರವು ಭೌಗೋಳಿಕವಾಗಿ ಗುರುತಿಸುವಿಕೆ ಪಡೆದ ಉತ್ಪನ್ನಗಳನ್ನು ಗುರುತಿಸಿ ಅಂಚೆ ಲಕೋಟೆ ಮೇಲೆ ಅವುಗಳ ಭಾವಚಿತ್ರ ಹಾಗೂ ಮಾಹಿತಿಯನ್ನು ಪ್ರಕಟಿಸುತ್ತದೆ. ಇಂತಹ ಬೆಳೆ ಹಾಗೂ ಉತ್ಪನ್ನವನ್ನು ಭಾರತದಾದ್ಯಂತ ಪರಿಚಯಿಸಲು ಅಂಚೆ ಇಲಾಖೆ ವ್ಯವಸ್ಥೆ ಮಾಡಿದೆ. ಇದಲ್ಲದೇ ಇಂತಹ ಉತ್ಪನ್ನಗಳನ್ನು ದೇಶಾದ್ಯಂತ ಗ್ರಾಹಕರಿಗೆ ನೇರವಾಗಿ ನೀಡಲು ಇಲಾಖೆ ನೆರವನ್ನು ಸಹ ನೀಡುತ್ತದೆ. ಸದ್ಯ ಮಲೆನಾಡು ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಮಾವಿನ ಮಿಡಿ ಇನ್ನು ಮುಂದೆ ದೇಶಾದ್ಯಂತ ತನ್ನ ಪರಿಮಳ ಬೀರಲಿದೆ.