DISTRICT: ಮಡಿಕೇರಿ : ಆದಿವಾಸಿ ಸಮುದಾಯ ಕೋವಿಡ್ ಲಸಿಕೆ ಪಡೆಯಲು ಆರಂಭಿಸಿದ್ದಾರೆ. ಕೊಡಗಿನ ವಿವಿಧೆಡೆ ವಾಸಿಸುತ್ತಿರುವ ಆದಿವಾಸಿಗಳು ಕಾಡೇ ನಮ್ಮ ದೇವರು, ಕಾಡಿನಲ್ಲಿ ಸಿಗುವ ಔಷಧಿಗಳೇ ನಮಗೆ ಗಿಡಮೂಲಿಕೆಗಳು ಎಂದು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಇದನ್ನು ಮನಗಂಡ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಹಾಡಿ ಜನರ ಮನವೊಲಿಸಿ ಲಸಿಕೆಯಿಂದಾಗುವ ಲಾಭಗಳ ಬಗ್ಗೆ ವಿವರಿಸಿದ್ದರು. ಇದರಿಂದ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡ ಆದಿವಾಸಿಗಳು ಕೋವಿಡ್ ಲಸಿಕೆ ಪಡೆಯಲು ಮುಂದಾದರು. ಇಂದು ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಯ ಆದಿವಾಸಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕೋವಿಡ್ ಸೋಂಕು ವ್ಯಾಪಿಸದಂತೆ ತಡೆಯಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಲಸಿಕೆ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದ್ದು, ಸೋಂಕು ಬಂದರೂ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಲಸಿಕೆ ಪಡೆದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು. ಪಶ್ಚಿಮಘಟ್ಟ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ, ಗ್ರಾ.ಪಂ ಪ್ರತಿನಿಧಿಗಳು, ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.