DISTRICT:
ಮಂಡ್ಯ : ಹಲಗೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 14 ಮಂದಿ ಪೊಲೀಸ್ ಸಿಬ್ಬಂದಿ ಒಂದೇ ಬಾರಿಗೆ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಂಡಿದ್ದು ಇವರಿಗೆ ಸಬ್ ಇನ್ಸ್ ಪೆಕ್ಟರ್ ಮಾರುತಿ ತಮ್ಮಣ್ಣ ನೇತೃತ್ವದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಹಲಗೂರಿನ ಕಲ್ಯಾಣ ಮಂಟಪವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಂದ್ರ ಮಾತನಾಡಿ, ಸಾರ್ವಜನಿಕರ ಸಹಕಾರ ಪೂರ್ಣವಾಗಿ ಪೋಲಿಸ್ ಸಿಬ್ಬಂದಿಗೆ ನೀಡಿದರೆ ಅವರು ನಮ್ಮ ಗ್ರಾಮದಲ್ಲೇ ಉತ್ತಮ ಸೇವೆ ಮಾಡಲು ಸಹಕಾರಿಯಾಗುತ್ತದೆ. ಆದ್ದರಿಂದ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಬ್ ಇನ್ಸ್ ಪೆಕ್ಟರ್ ಮಾರುತಿ ತಮ್ಮಣ್ಣ ಮಾತನಾಡಿ, ಸರ್ಕಾರಿ ಕೆಲಸ ಎಂದ ಮೇಲೆ ವರ್ಗಾವಣೆ ಆಗುವುದು ಸಾಮಾನ್ಯವಾಗಿರುತ್ತದೆ. ಈ ನಮ್ಮ ಠಾಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿದಂತೆ ನೀವು ಹೋಗಿರುವ ಠಾಣೆಯಲ್ಲೂ ಸಹ ಉತ್ತಮ ಸೇವೆ ಸಲ್ಲಿಸಿ. ವರ್ಗಾವಣೆ ಆಗಿರುವುದರಿಂದ ಇಲ್ಲಿನ ಕಾರ್ಯವೈಖರಿಗಳ ಬಗ್ಗೆ ಹೊಸದಾಗಿ ಬಂದಿರುವ ಸಿಬ್ಬಂದಿಯವರಿಗೆ ಸೂಚನೆ ಮತ್ತು ಸಲಹೆಗಳನ್ನು ನೀಡಿ ಎಂದು ತಿಳಿಸಿದರು.
ವರ್ಗಾವಣೆಗೊಂಡ 14 ಸಿಬ್ಬಂದಿಗೂ ಮೈಸೂರು ಪೇಟ ತೊಡಿಸಿ, ಫಲತಾಂಬೂಲ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.