DISTRICT:
ವಿಜಯನಗರ : ಜಿಲ್ಲೆಯ ಅಭಿವೃದ್ಧಿ ಪರ್ವದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನವಕರ್ನಾಟಕ ನಿರ್ಮಾಣಕ್ಕೆ ಭದ್ರ ಅಡಿಪಾಯವನ್ನು ಇಂದು ಹಾಕಲಾಗಿದೆ ಎಂದು ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇಂದು ವಿಜಯನಗರ ಜಿಲ್ಲಾ ರಚನೆಯ ವಿಶೇಷ ಅನುದಾನದ ಅಡಿಯಲ್ಲಿ 228 ಕೋಟಿ 94.26 ಲಕ್ಷ ರೂಪಾಯಿ ಗಳ ಒಟ್ಟು 67 ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು,. ರಾಜ್ಯದ ನೂತನ 31 ನೆ ಜಿಲ್ಲೆಯಾದ ವಿಜಯನಗರ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಪಣ ತೊಟ್ಟಿದ್ದೇವೆ. ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳ ಒತ್ತಾಸೆ ಹಾಗೂ ಸಂಪೂರ್ಣ ಸಹಕಾರ ಇದೆ ಎಂದರು.
ಫೆಬ್ರವರಿ 4 ದಂಡು ನಡೆಸಿದ ಸಭೆಯಲ್ಲಿ ಸಚಿವ ಆನಂದ್ ಸಿಂಗ್ ಹಾಗೂ ನಾವು ಜಿಲ್ಲೆಗೆ ಅಗತ್ಯವಿರುವ ತುರ್ತು ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿಯನ್ನು ನೀಡಿದ್ದೆವು. ನಮ್ಮ ಮನವಿಗೆ ಸ್ಪಂದಿಸುವ ಮೂಲಕ 228 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ದೊರೆಯುವ ಭರವಸೆ ಇದೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದ್ದೇವೆ. ಅದಕ್ಕೆ ಜಿಲ್ಲೆಯ ಅಧಿಕಾರಿಗಳ ಸಹಕಾರ ಬಹಳ ಅಗತ್ಯ ಎಂದು ತಿಳಿಸಿದರು.
67 ಕಾಮಗಾರಿಗಳಿಗೆ ಶಂಕುಸ್ಥಾಪನೆ:
ಜಿಲ್ಲೆಯ ಹೊಸಪೇಟೆ ತಾಲೂಕಿನ ಸರಕಾರಿ ಆಸ್ಪತ್ರೆಯನ್ನು 100 ಹಾಸಿಗೆಯಿಂದ 250 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಸುವ 104 ಕೋಟಿಗಳ ಕಾಮಗಾರಿ. ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಹೊಸಪೇಟೆ ಬಳ್ಳಾರಿ ರಸ್ತೆ, ಹೆಚ್.ಎಲ್.ಸಿ. ಕಾಲುವೆಯಿಂದ ಇಂಗಳಿಗಿ ಕ್ರಾಸ್ ವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿಯ 30 ಕೋಟಿ ರೂಪಾಯಿಗಳ ಕಾಮಗಾರಿ, ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಸಂಡೂರು - ಸಿರುಗುಪ್ಪ (ರಾಜ್ಯ ಹೆದ್ದಾರಿ-49) (ಹಂಪಿ ರಸ್ತೆಯ ಅನಂತಶಯನಗುಡಿಯಿಂದ ಕಮಲಾಪುರ ವರೆಗೆ) ಚತುಷ್ಪಥ ರಸ್ತೆ ನಿರ್ಮಾಣದ 28.50 ಕಾಮಗಾರಿ ಸೇರಿದಂತೆ 228 ಕೋಟಿ ರೂಪಾಯಿ ಗಳ ಕಾಮಗಾರಿಗೆ ಚಾಲನೆ ನೀಡಲಾಯಿತು.
ಪರಂಪರೆಯನ್ನು ಬಿಂಬಿಸುವ ಕಟ್ಟಡ ಗಳನ್ನು ನಿರ್ಮಿಸುವ ಮೂಲಕ ನಮ್ಮ ಸಾಂಪ್ರದಾಯಿಕತೆಯನ್ನು ಬಿಂಬಿಸುವುದು ಒಳ್ಳೆಯದು ಎಂದು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
ಸಚಿವ ಆನಂದ್ ಸಿಂಗ್ ಕೊಡುಗೆ ಶ್ಲಾಘನೆ:
ವಿಜಯನಗರ ಜಿಲ್ಲೆ ಉದಯಕ್ಕೆ ಕರಣೀಭೂತರಾದ ಸಚಿವ ಆನಂದ್ ಸಿಂಗ್ ಅವರನ್ನು ಶಶಿಕಲಾ ಜೊಲ್ಲೆ ಶ್ಲಾಘಿಸಿದರು. ಈ ಎಲ್ಲಾ ಕಾಮಗಾರಿಗಳಿಗೆ ಆನಂದ್ ಸಿಂಗ್ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಸಚಿವರಿಗೆ ಉಡಿ ತುಂಬಿ ಸನ್ಮಾನ:
ತಮ್ಮ ತವರು ಮನೆಯಷ್ಟೇ ಪ್ರೀತಿ ವಿಜಯನಗರ ಜಿಲ್ಲೆಯಲ್ಲಿ ದೊರೆಯುತ್ತಿದೆ ಎಂದ ಶಶಿಕಲಾ ಜೊಲ್ಲೆ ಅವರಿಗೆ ಆನಂದ್ ಸಿಂಗ್ ಅವರ ವತಿಯಿಂದ ಹಾಗೂ ಜಿಲ್ಲಾಡಳಿತದ ವತಿಯಿಂದ ಉಡಿ ತುಂಬಿ ಸನ್ಮಾನಿಸಲಾಯಿತು.