DISTRICT:
ಬೀದರ್: ಜಿಲ್ಲೆಯ ಔರಾದ್ ಹಾಗೂ ಹುಮ್ನಾಬಾದ್ ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಜನ ಸಂಕಲ್ಪಯಾತ್ರೆಯ ಹೆಸರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.
ಔರಾದ್ ಪಟ್ಟಣದ ಅಮರೇಶ್ವರ ಕಾಲೇಜು ಮೈದಾನದಲ್ಲಿ ಸಂಕಲ್ಪಯಾತ್ರೆಗಾಗಿ ಬೃಹತ್ ವೇದಿಕೆ ಸಜ್ಜುಗೊಳಿಸಲಾಗಿದೆ. ಹುಮ್ನಾಬಾದ್ ಪಟ್ಟಣದ ಥೇರು ಮೈದಾನದಲ್ಲಿಯೂ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಎರಡೂ ಜನ ಸಂಕಲ್ಪಯಾತ್ರೆ ಸಮಾವೇಶಗಳಲ್ಲಿ ತಲಾ ಸುಮಾರು 50 ಸಾವಿರ ಜನರು ಸೇರುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಹಲವು ಸಚಿವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೀದರ್ನ ವಾಯುನೆಲೆಗೆ ಬಂದ ಸಿಎಂ ಬೊಮ್ಮಾಯಿ, ಹೆಲಿಕಾಪ್ಟರ್ ಮೂಲಕ ಬಲ್ಲೂರು (ಜೆ) ಗ್ರಾಮಕ್ಕೆ ತೆರಳಿ 'ಸಿಪೆಟ್' ಕಾಲೇಜಿಗೆ ಕಾಲೇಜಿಗೆ ಭೂಮಿಪೂಜೆ ನೆರವೇರಿಸಿದರು. 'ಸಿಪೆಟ್' ಕಾಲೇಜು ₹ 90 ಕೋಟಿ ವೆಚ್ಚದಲ್ಲಿ 10 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಭೂಮಿಪೂಜೆ ಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚೌಹಾಣ್, ಶಂಕರ ಪಾಟೀಲ್ ಮುನೇನಕೊಪ್ಪ, ಕೇಂದ್ರ ಸಚಿವ ಭಗವಂತ ಖೂಬಾ ಭಾಗವಹಿಸಿದ್ದರು. ಭೂಮಿಪೂಜೆ ನೆರವೇರಿಸಿದ ನಂತರ ಅವರು ಔರಾದ್ನ ಅಮರೇಶ್ವರ ಕಾಲೇಜು ಮೈದಾನದಲ್ಲಿ ನಡೆಯಲಿರುವ ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಔರಾದ್ನಿಂದ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್ಗೆ ಸಿಎಂ ಹಾಗೂ ಯಡಿಯೂರಪ್ಪ ಪ್ರಯಾಣ ಬೆಳೆಸಲಿದ್ದಾರೆ. ಹುಮ್ನಾಬಾದ್ನ ಥೇರು ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯುವ ಜನ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸುವ ಇಬ್ಬರೂ ನಾಯಕರು ಸಂಜೆ 6ಕ್ಕೆ ಹೆಲಿಕಾಪ್ಟರ್ ಮೂಲಕ ಕಲ್ಬುರ್ಗಿಗೆ ತೆರಳಲಿದ್ದಾರೆ. ಸಿಎಂ ಬೆಂಗಳೂರಿನಿಂದ ಬೀದರ್ಗೆ ತೆರಳುವ ಮೊದಲು ಸಚಿವ ಸ್ಥಾನದ ಆಕಾಂಕ್ಷಿಗಳಾದ ಸಿ.ಪಿ.ಯೋಗೇಶ್ವರ್ ಹಾಗೂ ರಮೇಶ್ ಜಾರಕಿಹೊಳಿ ಕೆಲ ಸಮಯ ಮಾತನಾಡಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ.