DISTRICT: ಕೊಪ್ಪಳ: ಕೊರೊನಾದಿಂದ ಆಸ್ಪತ್ರೆ ಸೇರಿ ಹೊರ ಬಂದವರನ್ನು ಫಂಗಸ್ ಬೆಂಬಿಡದೇ ಕಾಡುತ್ತಿದೆ. ಬ್ಲ್ಯಾಕ್ ಫಂಗಸ್ ಕಾಯಿಲೆಗೆ ತುತ್ತಾದ ಕೊಪ್ಪಳ ಜಿಲ್ಲೆಯ ರೋಗಿಯೊಬ್ಬ ಚಿಕಿತ್ಸೆಗಾಗಿ 4 ದಿನ ಪರದಾಡಿದ್ದಾನೆ. ಫಂಗಸ್ಸಿಗೆ ಉಚಿತ ಚಿಕಿತ್ಸೆ ನೀಡುತ್ತೇವೆ ಎಂಬ ಸರ್ಕಾರದ ಮಾತು ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಹಿರೇಬೀಡನಾಳ ಗ್ರಾಮದ ನಿಂಗಪ್ಪ ಎಂಬಾತ ಬ್ಲ್ಯಾಕ್ ಫಂಗಸ್ ಕಾಯಿಲೆಗೆ ಚಿಕಿತ್ಸೆ ಪಡೆಯಲು ನಾಲ್ಕು ದಿನ ಹತ್ತಾರು ಆಸ್ಪತ್ರೆಗೆ ಅಲೆದಾಡಿದ್ದಾನೆ. ಮೇ. 20ರಂದು ನಿಂಗಪ್ಪ ಕೋವಿಡ್ ಸೋಂಕಿನಿಂದ ಆರಾಮವಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದು, ಅಂದೇ ಬ್ಲ್ಯಾಕ್ ಫಂಗಸ್ ಲಕ್ಷಣ ಕಾಣಿಸಿಕೊಂಡಿವೆ. ಕೂಡಲೇ ಕೊಪ್ಪಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಲ್ಲಿ ಚಿಕಿತ್ಸೆ ನಿರಾಕರಿಸಿದ್ದರಿಂದ ನಾಲ್ಕು ದಿನ ಬುಲೋರೋ ವಾಹನದಲ್ಲೇ ಹುಬ್ಬಳ್ಳಿ- ಕೊಪ್ಪಳಕ್ಕೆ ಅಲೆದಾಡಿದ್ದಾನೆ. ಚಿಕಿತ್ಸೆಗಾಗಿ ಬಳ್ಳಾರಿ ಜಿಲ್ಲೆಯ ಹರಪನಳ್ಳಿ, ಹಡಗಲಿ ಪಟ್ಟಣಕ್ಕೆ ಸುತ್ತಾಡಿ ಕೊನೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ಹೋಗಿರುವ ರೋಗಿಗೆ ರೆಫರಲ್ ಲೆಟರ್ ನೆಪ ನೀಡಿ, ಚಿಕಿತ್ಸೆ ನೀಡಿಲ್ಲ. ಆಗ ಮತ್ತೇ ಕೊಪ್ಪಳಕ್ಕೆ ಬಂದು ರೆಫರಲ್ ಲೆಟರ್ನೊಂದಿಗೆ ಹೋದಾಗಿಯೂ ಕೊಪ್ಪಳ ಡಿಸಿ ಅವರ ಪತ್ರ ಬೇಕು ಎಂದು ಚಿಕಿತ್ಸೆ ನಿರಾಕರಿಸಿ, ಕೊನೆಗೆ ನಿನ್ನೆ ಸಂಜೆ ಚಿಕಿತ್ಸೆ ನೀಡಿದ್ದಾರೆ. ಒಂದೆಡೆ ರಾಜ್ಯ ಸರ್ಕಾರ ಎಲ್ಲ ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್ ಗೆ ಚಿಕಿತ್ಸೆ ಸಿಗುತ್ತೆ ಅಂತಾ ಹೇಳುತ್ತಿದೆ. ಆದರೆ, ಕೊಪ್ಪಳದ ರೋಗಿ ನಾಲ್ಕು ದಿನ ಅಲೆದಾಡಿ ಹೈರಾಣಾಗಿರುವುದನ್ನು ನೋಡಿದರೆ ವಾಸ್ತವ ಬೇರೆಯೇ ಇದೆ ಎಂಬುದು ಮನದಟ್ಟಾಗುತ್ತದೆ.