DISTRICT:
ರಾಮನಗರ: ತೀವ್ರ ಮಳೆಯಿಂದಾಗಿ ಗ್ರಾಮದ ಪ್ರಮುಖ ಸಂಪರ್ಕ ಸೇತುವೆಯೊಂದು ಕುಸಿತಗೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಮಂಚನಬೆಲೆ ಸಮೀಪ ಇರುವ ಗದಗಯ್ಯದೊಡ್ಡಿ ಗ್ರಾಮದ ಸಂಪರ್ಕ ಸೇತುವೆ ಇದಾಗಿದ್ದು, ತೀವ್ರ ಮಳೆಯಿಂದಾಗಿ ಸೇತುವೆ ಸಂಪೂರ್ಣ ಹಾನಿಗೊಂಡಿದೆ.
ಗ್ರಾಮದಲ್ಲಿ ಸುಮಾರು ೬೦ ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಸೇತುವೆ ಸಂಪೂರ್ಣ ಕುಸಿತ ಹಿನ್ನಲೆಯಲ್ಲಿ ಗ್ರಾಮಕ್ಕೆ ಹೋಗುವ ದಾರಿ ಬಂದ್ ಆಗಿದೆ. ಇದೊಂದು ಕಿರು ಸೇತುವೆ ಬಂದ್ ಆದ ಹಿನ್ನಲೆ ಈ ಗ್ರಾಮಕ್ಕೆ ಹೋಗಲು ಸುಮಾರು ೭ ಕಿ.ಮಿ. ದೂರ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೇತುವೆ ಕುಸಿತದ ಬಗ್ಗೆ ಚುನಾವಣಾ ಪ್ರತಿನಿಧಿಗಳಿಗೆ ತಿಳಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಮತ ಕೇಳಲು ಮಾತ್ರ ಗ್ರಾಮಕ್ಕೆ ಬರುತ್ತಾರೆ. ನಂತರ ಯಾರು ಇತ್ತ ಗಮನ ಹರಿಸುವುದೇ ಇಲ್ಲ. ಈಗ ಸರಿ ಮಾಡುತ್ತೇವೆ ಆಗ ಸರಿ ಮಾಡುತ್ತೇವೆ ಎಂದು ಕೇವಲ ಭರವಸೆ ಮಾತ್ರ ನೀಡುತ್ತಾರೆ. ನಮ್ಮ ಸಮಸ್ಯೆಗೆ ಯಾರು ಕೂಡ ಸ್ಪಂದಿಸುವುದಿಲ್ಲ.
ಈ ಕೂಡಲೆ ಗ್ರಾಮಕ್ಕೆ ಹೊಸ ಸೇತುವೆ ನಿರ್ಮಾಣ ಮಾಡಿ, ಇಲ್ಲದಿದ್ರೆ ಗ್ರಾಮಸ್ಥರು ಹೆದ್ದಾರಿ ರಸ್ತೆ ತಡೆ ನಡೆಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.