DISTRICT: ರಾಮನಗರ: ರಾಮನಗರದಲ್ಲಿ ಈಚೆಗೆ ನಡೆದ ಮ್ಯಾನ್ ಹೋಲ್‌ಕಾಮಗಾರಿ ನಿರ್ವಹಣೆಯಲ್ಲಿ ಮೃತಪಟ್ಟ ಕಾರ್ಮಿಕರ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿ ರಾಜ್ಯ ಪೌರ ಕಾರ್ಮಿಕರ ಸಂಘ ಚನ್ನಪಟ್ಟಣ ಶಾಖೆಯ ಪದಾಧಿಕಾರಿಗಳು ಪ್ರತಿಭನೆ ಪ್ರತಿಭಟನೆ ನಡೆಸಿದರು. ಮೃತ ಕಾರ್ಮಿಕರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಿ ಸೂಕ್ತ ಪರಿಹಾರ ನೀಡಬೇಕು. ಬಾಕಿ ಉಳಿದಿರುವ ಪೌರಕಾರ್ಮಿಕರ ಹುದ್ದೆಗಳಿಗೆ ನೇರ ನೇಮಕಾತಿ ಮಾಡಬೇಕು. ಸ್ಥಳೀಯ ಸಂಸ್ಥೆಯ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಜಾರಿಗೊಳಿಸಬೇಕೆಂದು ಎಂದು ಒತ್ತಾಯಿಸಿ, ತೋಳಿಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿ ಪ್ರತಿಭಟಿಸಿದ ಪೌರ ಕಾರ್ಮಿಕರು, ಪೌರಾಯುಕ್ತ ಶಿವನಂಕಾರಿಗೌಡರಿಗೆ ಮನವಿ ಪತ್ರ ಸಲ್ಲಿಸಿದರು. ಸ್ಥಳೀಯ ಸಂಸ್ಥೆಗಳ ಆಡಳಿತ ವರ್ಗಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಬೇಜವಾಬ್ದಾರಿ ತನ ಪ್ರದರ್ಶಿಸಿದ್ದಾರೆ. ಮ್ಯಾನ್ ಹೋಲ್ ಕಾಮಗಾರಿ ನಿರ್ವಹಣೆ ಸಂದರ್ಭದಲ್ಲಿ ಅಮಾಯಕ ಪೌರಕಾರ್ಮಿಕರು ಜೀವವನ್ನು ಕಳೆದುಕೊಳ್ಳಬೇಕಿದೆ. ಪ್ರತಿಬಾರಿ ಇಂತಹ ದುರಂತಗಳು ಸಂಭವಿಸಿದಾಗ ಆಡಳಿತ ವರ್ಗ ಒಂದಿಷ್ಟು ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆಯೇ ವಿನಃ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೌರಕಾರ್ಮಿಕರಿಗೆ ಸೂಕ್ತ ಭದ್ರತೆ ನೀಡಬೇಕು. ಅತ್ಯಂತ ಅಭದ್ರತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆಯಲ್ಲಿನ ಪೌರಕಾರ್ಮಿಕರಿಗೆ ಬಾಕಿ ಉಳಿದಿರುವ ಹುದ್ದೆಗಳ ನೇರ ನೇಮಕಾತಿಗೆ ಸರಕಾರ ಚಾಲನೆ ನೀಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಅಭದ್ರತೆಯಲ್ಲಿರುವ ತ್ಯಾಜ್ಯ ಸಾಗಿಸುವ ವಾಹನ ಚಾಲಕರು, ವಾಟರ್ ಮೆನ್, ಡಾಟಾ ಆಪರೇಟರ್‌ಗಳಿಗೆ ಸಕಾಲದಲ್ಲಿ ಸೂಕ್ತ ವೇತನ ನೀಡಬೇಕು. ಗುತ್ತಿಗೆ ಬದಲಿಗೆ ನೇರ ವೇತನಕ್ಕೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಮಹೇಂದ್ರ, ಪದಾಧಿಕಾರಿಗಳಾದ ಮೂರ್ತಿ, ಬಾಬು, ಮಧು, ಶಿವಕುಮಾರ, ಶಂಕರ, ಮಂಜುಳ, ಇಂದ್ರಮ್ಮ, ವೆಂಕಟೇಶ್, ರವಿಕುಮಾರ್, ಶ್ರೀನಿವಾಸ, ಲೋಕೇಶ್, ಪಾರ್ವತಿ, ಮಂಜು, ರವೀಶ್, ವಿರುಪಾಕ್ಷ, ಕೃಷ್ಣ ಎಸ್., ರಾಮಚಂದ್ರ, ನವೀನ್‌ಕುಮಾರ್ ಮುಂತಾದವರಿದ್ದರು