DISTRICT: ರಾಮನಗರ: ಎಂಎಸ್ಐಎಲ್ ಮದ್ಯ ಮಾರಾಟದ ಚಿಲ್ಲರೆ ಮಳಿಗೆ ತೆರೆಯಲು ಚರ್ಚ್ ರಸ್ತೆಯ ಕ್ರಿಶ್ಚಿಯನ್ ಸಮಾಧಿ ಮುಂಭಾಗದ ಮಳಿಗೆಯೊಂದರಲ್ಲಿ ಸರ್ಕಾರವು ಅನುಮತಿ ನೀಡಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಚನ್ನಪಟ್ಟಣ ಅಬಕಾರಿ ಅಧಿಕಾರಿಗಳು ಸರ್ವೇಗೆ ಬಂದಾಗ ಸ್ಥಳೀಯರು ವಿರೋಧಿಸಿದ ಘಟನೆ ನಡೆದಿದೆ. ಅಪ್ಪಗೆರೆ ಗ್ರಾಮದಲ್ಲಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜು ಇದೆ. ಕೂಗಳತೆ ದೂರದಲ್ಲಿ ತೋಟಗಾರಿಕೆ ಇಲಾಖೆ ಮತ್ತು ನಗರ ಪ್ರಾಧಿಕಾರದ ಕಚೇರಿಗಳಿವೆ. ಮಳಿಗೆಯ ಮುಂಭಾಗವೇ ಕ್ರಿಶ್ಚಿಯನ್ ಸಮುದಾಯದ ಸ್ಮಶಾನವಿದ್ದು, ಪರಿಶಿಷ್ಟ ಜಾತಿಯ ಗ್ರಾಮವಿದ್ದು, ಪ್ರತಿನಿತ್ಯವೂ ಸಹಸ್ರಾರು ಮಂದಿ ಓಡಾಡುತ್ತಿರುತ್ತಾರೆ ಎಂದು ಸ್ಥಳೀಯರು ವಿರೋಧಿಸಿದರು. ನಗರದ ಎಂಟನೇ ವಾರ್ಡ್ ನ ನಿವಾಸಿಗಳು, ಸಿಎಸ್ಐ ಬೆಥನಿ ಚರ್ಚ್ ನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಮತ್ತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ವತಿಯಿಂದ ಸದಸ್ಯರಾದ ಬಿ ಕಿರಣ್ ಕುಮಾರ್ ರವರು, ಬೆಂಗಳೂರು ಅಬಕಾರಿ ಆಯುಕ್ತರು, ಚನ್ನಪಟ್ಟಣ ಅಬಕಾರಿ ನಿರೀಕ್ಷಕರು ಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದರು. ಚನ್ನಪಟ್ಟಣ ನಗರದಲ್ಲಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಈಗಾಗಲೇ ಒಂದು ಎಂಎಸ್ಐಎಲ್ ಚಿಲ್ಲರೆ ಮದ್ಯ ಮಳಿಗೆ ಇದ್ದು, ಈ ಜಾಗದಲ್ಲಿ ಮತ್ತೊಂದು ಮಳಿಗೆ ನಿರ್ಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಾವು ಸರ್ವೇ ಮಾಡಿ, ವರದಿ ಸಲ್ಲಿಸಿತ್ತೇವೆ ಎಂದು ಚನ್ನಪಟ್ಟಣ ತಾಲ್ಲೂಕಿನ ಅಬಕಾರಿ ನಿರೀಕ್ಷಕರಾದ ಇಂದುಕುಮಾರ್ ತಿಳಿಸಿದರು.