DISTRICT: ಕಿರುಗುಂದ ರಫೀಕ್ ಸಕಲೇಶಪುರ ತಾಲೂಕಿನ ವಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಿಲೆ ವ್ಯೂ ಪಾಯಿಂಟ್ ಸಮೀಪದ ಮಂಕನಹಳ್ಳಿಯಲ್ಲಿ ರಿಡ್ಜ್ ಪಾಯಿಂಟ್ ಒಂದಿದೆ. ಇದು ಬ್ರಿಟೀಷರ ಕಾಲದಲ್ಲಿ ಕಲ್ಲಿನಲ್ಲಿ ಕೆತ್ತಿ ನಿರ್ಮಿಸಿರುವಂತೆ ಗೋಚರಿಸುತ್ತಿದೆ. ಈ ರಿಡ್ಜ್ ಪಾಯಿಂಟ್ನ ಒಂದು ಬದಿಯಲ್ಲಿ ಅರಬ್ಬಿ ಸಮುದ್ರ, ಮತ್ತೊಂದು ಬದಿಯಲ್ಲಿ ಬಂಗಾಳಕೊಲ್ಲಿ ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ. ಮಂಕನಹಳ್ಳಿ ಎಂದರೆ ಎತ್ತರದ ಪಶ್ಚಿಮಘಟ್ಟ ಪರ್ವತ ಶ್ರೇಣಿಗಳು, ತೊರೆಗಳು, ಜಲಪಾತಗಳಿರುವ ಗ್ರಾಮ. ಈ ಭಾಗದಲ್ಲಿ ಹುಟ್ಟುವ ಹೊಳೆಗಳು ರಾಜ್ಯದ ಎರಡು ಬೃಹತ್ ನದಿಗಳೊಂದಿಗೆ ಸೇರಿ ವಿರುದ್ಧ ದಿಕ್ಕಿನಲ್ಲಿ ಹರಿಯುವ ಮೂಲಕ ಎರಡು ಸಮುದ್ರವನ್ನು ಸೇರುತ್ತದೆ. ರಿಡ್ಜ್ ಪಾಯಿಂಟ್ನಲ್ಲಿ ಬರೆದಿರುವ ಪ್ರಕಾರ ಇಲ್ಲಿನ ಪಶ್ಚಿಮ ಭಾಗದ ಬೆಟ್ಟಕುಮರಿ ಪ್ರದೇಶದಿಂದ ಹುಟ್ಟುವ ಅಡ್ಡಹೊಳೆ ಮತ್ತು ಪುಷ್ಪಗಿರಿಯ ಗಿರಿಹೊಳೆ ಎರಡೂ ಸೇರಿ ಕುಮಾರಧಾರ ನದಿಯಾಗುತ್ತದೆ. ನಂತರ ಸುಬ್ರಹ್ಮಣ್ಯದ ಕಡೆಗೆ ಹರಿದು ಹೋಗುತ್ತದೆ. ನಂತರ ಗುಂಡ್ಯ ನದಿಯೊಂದಿಗೆ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಸೇರಿ ಮಂಗಳೂರು ಸಮೀಪ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಹಾಗೆಯೇ ಈ ಪರ್ವತ ಶ್ರೇಣಿಗಳ ಪೂರ್ವಬದಿಯಲ್ಲಿ ಬಿದ್ದ ಮಳೆನೀರು ಮತ್ತು ಸಣ್ಣ ತೊರೆಗಳು ಹೇಮಾವತಿಯೊಂದಿಗೆ ಸೇರಿಕೊಳ್ಳುತ್ತವೆ. ಹೇಮಾವತಿ ನದಿ ಸಕಲೇಶಪುರ ಪಟ್ಟಣದ ಪಕ್ಕದಲ್ಲೇ ಹರಿದು ಮಂಡ್ಯ ಜಿಲ್ಲೆಯ ಕೆಆರ್ಎಸ್ ಬಳಿ ಕಾವೇರಿ ನದಿಯೊಂದಿಗೆ ಸಂಗಮವಾಗಿ ತಮಿಳುನಾಡಿನಲ್ಲಿ ಬಂಗಾಳಕೊಲ್ಲಿ ಸೇರುತ್ತದೆ. ರಿಡ್ಜ್ ಪಾಯಿಂಟ್ ಸ್ಥಳಾಂತರ ಮಾಡಿದ್ದಾರೆಯೇ? ಬಹುಕಾಲದ ಹಿಂದೆ ಇದ್ದ ರಿಡ್ಜ್ ಪಾಯಿಂಟನ್ನು ಇದ್ದ ಜಾಗದಿಂದ ಸ್ಥಳಾಂತರ ಮಾಡಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಇದು ಮೊದಲು ಬೇರೆ ಸ್ಥಳದಲ್ಲಿತ್ತು ಎನ್ನಲಾಗುತ್ತಿದೆ. ಈಗ ರಸ್ತೆ ಪಕ್ಕ ಸ್ಥಾಪಿಸಲಾಗಿದೆಯಂತೆ. ಆಗಿರಲೂಬಹುದು. ಏಕೆಂದರೆ ಈಗ ಇರುವ ರಿಡ್ಜ್ ಪಾಯಿಂಟ್ ಸೂಕ್ತ ಸ್ಥಳದಲ್ಲಿಲ್ಲ. ಎರಡೂ ಬದಿಗೆ ನೀರು ಹರಿಯುವ ಸ್ಥಳಕ್ಕೆ ಅವಳವಡಿಸಿದ್ದರೆ ಸೂಕ್ತವಾಗುತ್ತಿತ್ತು ಎಂದು ಈ ಬಗ್ಗೆ ಪರಿಶೀಲಿಸಿರುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಿಜ. ಬ್ರಿಟೀಷರು ಆ ಕಾಲದಲ್ಲೇ ಸಂಶೋಧನಾ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು. ವಾಸ್ಕೋಡಿಗಾಮ ನಂಥವರು ಸಮುದ್ರದ ಮೂಲಕವೇ ಭಾರತಕ್ಕೆ ಜಲಮಾರ್ಗ ಕಂಡುಹಿಡಿದಿರುವುದು ಇತಿಹಾಸದ ಪುಟಗಳಲ್ಲಿವೆ. ಹೀಗಿರುವಾಗ ಈ ಮಂಕನಹಳ್ಳಿಯಲ್ಲಿ ಸಣ್ಣದೊಂದು ರಿಡ್ಜ್ ಪಾಯಿಂಟ್ ಸ್ಥಾಪಿಸುವಲ್ಲಿ ಎಡವಿದ್ದಾರೆಂದರೆ ಅದು ಹಾಸ್ಯಾಸ್ಪದವಲ್ಲವೇ!? ರಿಡ್ಜ್ ಎಂದರೆ ಪರ್ವತ ಶ್ರೇಣಿ. ಮಂಕನಹಳ್ಳಿಯಲ್ಲಿರುವ ಕಲ್ಲಿನ ಸ್ಮಾರಕದ ಮೇಲ್ಭಾಗದಲ್ಲಿ ರಿಡ್ಜ್ ಎಂದು ಕೆತ್ತಲಾಗಿದೆ. ಕೆಳಗೆ ಎರಡೂ ಬದಿಯಲ್ಲಿ ಸಮುದ್ರಗಳ ಹೆಸರು ಬರೆಯಲಾಗಿದೆ. ಪಕ್ಕದಲ್ಲೇ ‘ಮಂಕನಹಳ್ಳಿ’ಊರಿನ ನಾಮಫಲಕವಿದೆ. ಈ ರಿಡ್ಜ್ ಪಾಯಿಂಟನ್ನು ಯಾರು, ಯಾವಾಗ ನಿರ್ಮಿಸಿದರು ಎಂಬ ಮಾಹಿತಿ ಲಭ್ಯವಾಗಿಲ್ಲ. ----------------------------- “ಎತ್ತಿನಹೊಳೆ ಮೂಲಕ ಅರಬ್ಬಿ ಸಮುದ್ರಕ್ಕೆ ಹಾಗೂ ಹೇಮಾವತಿ ನದಿ ಮೂಲಕ ಬಂಗಾಳಕೊಲ್ಲಿಗೆ ನೀರು ಹರಿದು ಹೋಗುವ ಎರಡೂ ಬದಿಗೆ ಇಳಿಜಾರು ಹೊಂದಿರುವ ಜಾಗಗಳು ನಮ್ಮಲ್ಲಿ ಅನೇಕ ಕಡೆ ಕಾಣಬಹುದು. ಮೂಕನಗುಡ್ಡ, ಕಾಡುಮನೆ ಸೇರಿದಂತೆ ಹಾನುಬಾಳು ಸಮೀಪದಲ್ಲೂ ಇಂತಹ ಜಾಗಗಳಿವೆ. ಮಂಕನಹಳ್ಳಿಯಲ್ಲಿ ಸೂಕ್ತ ಜಾಗದಲ್ಲಿ ರಿಡ್ಜ್ ಪಾಯಿಂಟ್ ಹಾಕಿಲ್ಲ. ಇಲ್ಲಿ ಸಣ್ಣ ಹೊಳೆಯ ನೀರು ಸಂಪೂರ್ಣ ಅರಬ್ಬೀ ಸಮುದ್ರದ ದಿಕ್ಕಿಗೆ ಚಲಿಸುತ್ತದೆ. ಸುಮಾರು 1 ಕಿ.ಮೀಯಷ್ಟು ಅಂತರವುಳ್ಳ ಜಾಗಕ್ಕೆ ಹಾಕಿದ್ದಾರೆ. ಇಲ್ಲಿನ ಪಟ್ಲಾ ಬೆಟ್ಟದ ತುದಿಗೆ ಬಿದ್ದ ಒಂದು ಹನಿನೀರು ಎರಡು ಭಾಗವಾದರೆ ಒಂದು ಭಾಗ ಬಂಗಾಳಕೊಲ್ಲಿಗೆ ಹೋಗುತ್ತದೆ, ಇನ್ನೊಂದು ಭಾಗ ಅರಬ್ಬೀ ಸಮುದ್ರಕ್ಕೆ ಹೋಗುತ್ತದೆ. ಇಂತಹ ಸ್ಥಳದಲ್ಲಿ ರಿಡ್ಜ್ ಪಾಯಿಂಟ್ ಇಟ್ಟಿದ್ದರೆ ಸೂಕ್ತವಾಗಿರುತ್ತಿತ್ತು. ಬ್ರಿಟೀಷರ ಕಾಲದಲ್ಲೇ ಅಳವಡಿಸಿರಬಹುದು. ಅವರು ಅಳವಡಿಸಿರುವ ಸ್ಥಳ ವ್ಯತ್ಯಾಸವಾಗಿದ್ದರೂ ಸಹ ಆ ಕಾಲದಲ್ಲೇ ಇಂತಹದ್ದೆನ್ನೆಲ್ಲಾ ಗಮನಿಸಿ ರಿಡ್ಜ್ ಸ್ಥಾಪಿಸಿದ್ದಾರೆ ಎಂಬುದೇ ಮೆಚ್ಚಬೇಕಾದ ಕಾರ್ಯವಾಗಿದೆ.” -ಹುರುಡಿ ವಿಕ್ರಂ, ಪರಿಸರವಾದಿ