DISTRICT:
ಗದಗ: ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ. ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಶಾಲೆಗೆ ಆಗಮಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಈ ಮಧ್ಯೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಯಾರು ಹಿಜಾಬ್ ಧರಿಸಿ ಬರುವಂತಿಲ್ಲ ಎಂದು ಶಿಕ್ಷಣ ಸಚಿವರು ಖಡಕ್ ಸೂಚನೆ ನೀಡಿದ್ದಾರೆ. ಈ ಮಧ್ಯೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಆರೋಪದ ಮೇಲೆ ಏಳು ಮಂದಿ ಶಿಕ್ಷಕರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಗದಗ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಆರೋಪದ ಮೇಲೆ ಇಬ್ಬರು ಮುಖ್ಯ ನಿರೀಕ್ಷಕರು ಸೇರಿದಂತೆ ಏಳು ಶಿಕ್ಷಕರನ್ನು ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.
ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷೆ ಬರೆಯುತ್ತಿರುವ ವಿಡಿಯೋವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಗದಗದ ಸಿ.ಎಸ್. ಪಾಟೀಲ್ ಬಾಲಕರ ಪ್ರೌಢಶಾಲೆ ಮತ್ತು ಸಿ.ಎಸ್. ಪಾಟೀಲ್ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು.
ಶಿಕ್ಷಕರಾದ ಎಸ್.ಯು. ಹೊಕ್ಕಲದ್, ಎಸ್.ಎಂ. ಪತ್ತಾರ್, ಎಸ್.ಜಿ. ಗೋಡ್ಕೆ, ಎಸ್.ಎಸ್. ಗುಜಮಾಗಡಿ, ಮತ್ತು ವಿ.ಎನ್. ಕಿವುಡಾರ್ ಮತ್ತು ಮುಖ್ಯ ನಿರೀಕ್ಷಕರಾದ ಕೆ.ಬಿ. ಭಜಂತ್ರಿ ಮತ್ತು ಬಿ.ಎಸ್. ಹೊನಗುಡಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವಲಿಂಗಪ್ಪ ಜಿಎಂ ಆದೇಶದಲ್ಲಿ ತಿಳಿಸಿದ್ದಾರೆ.
ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಕ್ಕಾಗಿ ಶಿಕ್ಷಕರನ್ನು ಅಮಾನತುಗೊಳಿದ್ದಾಗಿ ಬಸವಲಿಂಗಪ್ಪ ಜಿ.ಎಂ ತಿಳಿಸಿದ್ದಾರೆ.