DISTRICT: ವರದಿ: ರಾಜೇಶ್ ಕೊಂಡಾಪುರ ರಾಮನಗರ: ಕೊರೊನಾ ಸೋಂಕಿನಿಂದ ಸರಕಾರ ಲಾಕ್‌ಡೌನ್ ಮಾಡಿರುವ ಹಿನ್ನಲೆಯಲ್ಲಿ ಬೆಂಗಳೂರಿನಿಂದ ವಲಸೆ ಬಂದ ವ್ಯಕ್ತಿಯೊಬ್ಬರು ಹಳ್ಳಿಗೆ ಬಂದು ಹಸು ಸಾಕಣೆ ಮಾಡುತ್ತಾ ತಮ್ಮ ಬಿಡುವಿನ ವೇಳೆಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಾ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎನ್. ಮಲ್ಲೇಶ್ ಎಂಬುವವರು ಬೆಂಗಳೂರಿನಲ್ಲಿ ಖಾಸಗಿಯಾಗಿ ವೃತ್ತಿ ಮಾಡಿಕೊಂಡಿದ್ದರು. ಕಳೆದ ವರ್ಷ ಲಾಕ್‌ಡೌನ್ ಮಾಡಿದ್ದರಿಂದ ಉದ್ಯೋಗವಿಲ್ಲದೇ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಿದ್ದೇಗೌಡನದೊಡ್ಡಿಗೆ ಬಂದು ಸಣ್ಣದೊಂದು ಹಸುವಿನ ಫಾರಂ ಮಾಡಿಕೊಂಡು ಪ್ರಸ್ತುತ ಜೀವನ ನಿರ್ವಹಣೆ ಮಾಡಿಕೊಂಡಿದ್ದಾರೆ. ಆದರೇ ಬಿಡುವಿನ ವೇಳೆಯಲ್ಲಿ ಕಾಲಾಹರಣ ಮಾಡಲು ಇಚ್ಚಿಸದೇ ಸಮಾಜಮುಖಿ ಕೆಲಸ ಮಾಡಲು ಮುಂದಾಗಿದ್ದಾರೆ. ಅವರಿಗೆ ಮತ್ತೇ ಲಾಕ್‌ಡೌನ್ ಸಂದರ್ಭದಲ್ಲಿ ಕಂಡಿದ್ದು, ಕೊರೊನಾ ಬಗ್ಗೆ ಅರಿವು ಮೂಡಿಸುವುದು. ಅದರಂತೆ ತಾವು ವಾಸ ಮಾಡುವ ಸಿದ್ದೇಗೌಡನದೊಡ್ಡಿಗೆ ಸೇರಿದ ವಿರುಪಾಕ್ಷಿಪುರ ಗ್ರಾ.ಪಂ.ನಿಂದ ಸ್ವಯಂ ಸೇವಕನಾಗಿ ನೋಂದಣಿ ಮಾಡಿಸಿಕೊಂಡು, ಹತ್ತು-ಹಲವು ದಿನಗಳಿಂದ ತಮ್ಮ ಸೈಕಲ್‌ಗೆ ಧ್ವನಿವರ್ಧಕ ಕಟ್ಟಿಕೊಂಡು ಕೊರೊನಾದಿಂದ ಉಂಟಾಗುತ್ತಿರುವ ತೊಂದರೆಗಳು, ಸೋಂಕು ಹರಡುವ ಬಗೆ, ಜನತೆಗೆ ರೋಗ ಉಲ್ಭಣಿಸುತ್ತಿದ್ದರೂ ಮುನ್ನೆಚ್ಚರಿಕೆ ಕೈಗೊಳ್ಳದೆ ಉದಾಸೀನತೆ ತೋರುತ್ತಿರುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹಳ್ಳಿ-ಹಳ್ಳಿಗಳಿಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ. ವಿರುಪಾಕ್ಷಿಪುರ ಗ್ರಾ.ಪಂ., ಹೊಂಗನೂರು ಗ್ರಾ.ಪಂ. ಹಾಗೂ ಕೋಡಂಬಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುತ್ತಿರುವ ಮಲ್ಲೇಶ್ ಕೋಡಂಬಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರಚಾರ ನಡೆಸುವ ವೇಳೆ ಮಾತನಾಡಿ, ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರಜಾ ದಿನಗಳು ಮತ್ತು ಬಿಡುವಿನ ವೇಳೆಯಲ್ಲಿ ಸ್ವಯಂಸೇವಕನಾಗಿ ಹತ್ತಾರು ಸಂಘ-ಸಂಸ್ಥೆಗಳು ಹಾಗೂ ಸರಕಾರದ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಲಾಕ್‌ಡೌನ್‌ನಿಂದ ನಾನು ಈಗ ಸಿದ್ದೇಗೌಡನದೊಡ್ಡಿಯಲ್ಲಿ ಹಸು ಸಾಕಣೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ಬಿಡುವಿನ ವೇಳೆಯಲ್ಲಿ ನಾನು ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದು, ಜನರು ಇನ್ನು ಕೊರೊನಾ ಮಾರಿ ವ್ಯಾಪಕಗೊಳ್ಳುತ್ತಿದ್ದರೂ ಜಾಗೃತರಾಗದಿರುವುದು ಬೆಸರ ತರಿಸಿದೆ. ನಾನು ನನ್ನ ಶಕ್ತಿ ಮೀರಿ ಯಾವುದೇ ಫಲಾಪೇಕ್ಷೆ ಇಲ್ಲದೆ ಅರಿವು ಮೂಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಒಟ್ಟಾರೆ, ಮಲ್ಲೇಶ್ ಅವರು ಹಸುಗಳನ್ನು ಸಾಕಿಕೊಂಡು ಜೀವನ ನಿರ್ವಹಣೆ ಮಾಡುವುದು ತ್ರಾಸದ ಕೆಲಸ. ಇಂತಹದ್ದರಲ್ಲೂ ಅವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ.