DISTRICT: ವರದಿ: ಸಂದೇಶ್ ಶೆಟ್ಟಿ ಆಜ್ರಿ ಉಡುಪಿ: ಕುಂದಾಪುರ ತಾಲೂಕಿನ ಹೊಸಂಗಡಿಯ ಕೆಪಿಸಿ ಉದ್ಯೋಗಿ ಕೆ. ರಾಮಸ್ವಾಮಿ ಮಗಳು ಪ್ರಿಯಾ ಎಂ.ಆರ್. ನಾಯಿ ಮರಿಗೆ ನಡೆಯಲು ಅನುಕೂಲವಾಗುವಂತೆ ಮಾಡಿ ಮಾನವೀಯತೆ ತೋರಿದ್ದಾಳೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೊಸಂಗಡಿ ವಿದ್ಯಾರ್ಥಿನಿಯೊಬ್ಬಳು ಮಾನವೀಯ ಮೌಲ್ಯ ಉಳ್ಳಂಥ ಕೆಲಸ ಮಾಡಿ ಜಿಲ್ಲೆಯಾದ್ಯಂತ ಶಬಾಷ್ ಎಂದೆನಿಸಿಕೊಂಡಿದ್ದಾಳೆ. ಹೊಸಂಗಡಿ ಕೆಪಿಸಿ ಕ್ವಾಟ್ರಸ್ ಸಮೀಪ ಮೇ ತಿಂಗಳಿನಲ್ಲಿ ನಾಯಿ ಮರಿಯೊಂದು ಅಪಘಾತವಾಗಿ ಕೂಗುತ್ತಿರುವುದನ್ನು ಪ್ರಿಯಾ ನೋಡಿದ್ದಾರೆ. ತಮ್ಮ ಮನೆಯಿಂದ ಸ್ವಲ್ವ ದೂರದಲ್ಲಿ ಇದ್ದುದರಿಂದ ಇವರೇ ಅದಕ್ಕೆ ಆಹಾರವನ್ನು ನೀಡಿ ಬಂದಿದ್ದರು. ಮರುದಿನ ಆ ನಾಯಿ ಮರಿ ತೆವಳಿಕೊಂಡೇ ಅವರ ಮನೆಗೆ ಹಿಂಬಾಲಿಸಿ ಬಂದಿತ್ತು. ಈ ಹೊತ್ತಿಗಾಗಲೇ ನಾಯಿಮರಿಯ ಹಿಂದಿನ ಎರಡೂ ಕಾಲಿಗೆ ಗಂಭೀರ ಗಾಯಗೊಂಡದ್ದಲ್ಲದೇ, ಸೊಂಟದ ಭಾಗ ಬಲ ಕಳೆದುಕೊಂಡಿತ್ತು. ಹೀಗೆ ಬಂದ ನಾಯಿಮರಿಗೆ ಪ್ರಥಮ ಚಿಕಿತ್ಸೆ ನೀಡಿ ಮನೆಯಲ್ಲೆ ಉಳಿಸಿಕೊಂಡು ಆರೈಕೆ ಮಾಡಿದರು. ಚಿಕಿತ್ಸೆಗೆ ಸ್ಪಂದಿಸಿದ ನಾಯಿ ಚೇತರಿಕೆ ಕಂಡರೂ ಓಡಾಡಲು ಆಗುತ್ತಿರಲಿಲ್ಲ. ನಾಯಿಮರಿಯ ಯಾತನೆ ನೋಡಿ ಮರುಗಿದ ಪ್ರಿಯಾ ಅದನ್ನು ನಡೆಯುವಂತೆ ಮಾಡಲು ಯೋಚನೆ ಮಾಡಿದ್ದಾಳೆ, ನಂತರ ತನ್ನ ತಂದೆಯ ಸಹಕಾರದೊಂದಿಗೆ ಅದು ಮತ್ತೆ ಓಡಾಡುವಂತೆ ಮಾಡಿದ್ದಾಳೆ. ದುಬಾರಿ ಬೆಲೆಯ ಉಪಕರಣಗಳನ್ನು ಕೊಳ್ಳಲು ಸಾಧ್ಯವಿಲ್ಲ ಎಂದು ತಾವೇ ಯುಟ್ಯೂಬ್ ವಿಡಿಯೋ ಸಹಕಾರದಿಂದ ನಾಯಿ ಸಂಚರಿಸಲು ಗಾಲಿಯೊಂದನ್ನು ತಯಾರಿಸಿದ್ದಾಳೆ. ಎರಡು ಉದ್ದದ ಪೈಪ್ಗೆ ಹೊಟ್ಟೆ ಕೆಳಭಾಗಕ್ಕೆ ವೀ ಬೆಂಡ್ ಮತ್ತು ಹಿಂಭಾಗದಲ್ಲಿ ಬೆಂಡ್ ಪೈಪ್ ಜೋಡಿಸಿ ಸೊಂಟದ ಎರಡೂ ಬದಿಯಲ್ಲಿ ಪೈಪ್ ಜೋಡಿಸಿದರು. ನೆಲಕ್ಕೆ ಮುಖಮಾಡಿದ ಪೈಪಿಗೆ ಎರಡೂ ಕಡೆ ತೂತು ಕೊರೆದು ಬೋಲ್ಟ್ ನಟ್ ಅಳವಡಿಸಿ ಗಾಲಿ ಜೋಡಿಸಿ, ಕತ್ತಿನ ಬಳಿ ಬೆಲ್ಟ್ ಹಾಕಿ ಎದೆ ಭಾಗದಲ್ಲಿ ಬಿಗಿದು, ಹಿಂಗಾಲು ಬೆನ್ನಿನ ಹಿಂದಿನ ಪೈಪಿಗೆ ಆತುಕೊಳ್ಳುವಂತೆ ಮಾಡಿದರು. ಗಾಲಿಗಾಡಿ ನಾಯಿಗೆ ಕಟ್ಟಿ ಓಡಾಟ ಅಭ್ಯಾಸ ಕೂಡಾ ಮಾಡಿಸಿದರು. ನಾಯಿ ಈಗ ಗಾಲಿ ಗಾಡಿಯಲ್ಲಿ ಎಲ್ಲೆಂದರಲ್ಲಿ ಸಂಚರಿಸುತ್ತದೆ. ಪ್ರಿಯಾ ಅವರನ್ನು ಹಿಂಬಾಲಿಸುತ್ತದೆ. ಯಾರದ್ದೋ ಕಾರಿನ ಚಕ್ರದಡಿ ಸಿಲುಕಿ ತನ್ನ ಎರಡೂ ಕಾಲನ್ನ ಕಳೆದುಕೊಂಡ ನಾಯಿಮರಿಯನ್ನು ಎರಡು ಚಕ್ರದ ಮೂಲಕ ಓಡಾಡುವ ರೀತಿ ಮಾಡಿದ ಈ ವಿದ್ಯಾರ್ಥಿನಿಯ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.