DISTRICT:
ಶ್ರೀರಂಗಪಟ್ಟಣ: ಕೋಮುಸಾಮರಸ್ಯಕ್ಕೆ ಧಕ್ಕೆ ಬರುವ ಹೇಳಿಕೆ ನೀಡಿದ್ದ ಅರಸಿಕರೆ ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿಗೆ ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರೂಪಾಯಿ ಬಾಂಡ್ ಹಾಗೂ ಸಾಕ್ಷಿಗಳನ್ನು ಬೆದರಿಸಬಾರದು ಎಂಬ ಷರತ್ತಿನ ಮೇರೆಗೆ ಜೆಎಂಎಫ್ ಸಿ ಹೆಚ್ಚುವರಿ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಆಯೇಷಾ ಪಿ ಮಜೀದ್ ಅವರು ಜಾಮೀನು ಮಂಜೂರು ಮಾಡಿದರು.
ಸ್ವಾಮೀಜಿ ಅವರನ್ನು ಪೊಲೀಸರು ಮಂಗಳವಾರ ನಸುಕಿನಲ್ಲಿ ಅವರ ಮಠದಿಂದ ಬಂಧಿಸಿದ್ದರು. ಅವರ ಜಾಮೀನು ಕೋರಿ ಬುಧವಾರ ವಕೀಲರಾದ ಟಿ.ಬಾಲರಾಜು, ಎಸ್.ಆರ್.ಸಿದ್ದೇಶ್ ಮತ್ತು ಎ.ಟಿ.ಜಯಕುಮಾರ ಅರ್ಜಿ ಸಲ್ಲಿಸಿದ್ದರು.
ಪಟ್ಟಣದ ಐತಿಹಾಸಿ ಜಾಮೀಯಾ ಮಸೀದಿಯನ್ನು ಕೆಡವಿ, ಅದೇ ಜಾಗದಲ್ಲಿ ಹನುಮಮಂದಿರ ನಿರ್ಮಿಸಬೇಕು ಎಂದು ಹಿಂದೂ ಸಂಘಟನೆಗಳಿಗೆ ಸ್ವಾಮೀಜಿ ಕರೆ ನೀಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಆರೋಪ ಎದುರಿಸುತ್ತಿದ್ದಾರೆ. ಪುರತತ್ವ ಇಲಾಖೆ ಸಿಬ್ಬಂದಿಯೊಬ್ಬರು ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದರು.