DISTRICT:
ಸಾಧಿಸುವ ಛಲವೊಂದಿದ್ದರೆ ಸಾಕು, ಅದಕ್ಕೊಂದಿಷ್ಟು ಪರಿಶ್ರಮ ಸೇರಿಸಿದ್ರೆ ಎಂತವರು ಏನು ಬೇಕಾದರೂ ಸಾಧನೆ ಮಾಡಬಹುದು. ಎಲ್ಲಾ ಇದ್ದವರು ಸಾಧಿಸೋದ್ರಲ್ಲಿ ಕೊಂಚ ವಿಶೇಷ ಎನಿಸಿದ್ರೆ ಕೈಲಾಗದವರು, ಅಂಧರು ಸಾಧಿಸೋದಿದೆಯಲ್ಲಾ ಅದು ಅವಿಸ್ಮರಣೀಯ. ಅಂಧರಾದ ಇಬ್ಬರು ಸಹೋದರರು ವಿಧಿಗೆ ಸವಾಲ್ ಎಸೆದು ಸಾಧನೆಯ ಶಿಖರ ಏರಿದ್ದಾರೆ.
ಸುಂದರ ಕಲಾಕೃತಿ. ಗಗನವನ್ನ ಸ್ಪರ್ಶಿಸುವಂತೆ ಸಿದ್ದವಾಗಿ ನಿಂತಿರೋ ಸುಂದರ ತೇರು. ಅದೆಂತಹ ಕರಕುಶಲತೆ ಅದೆಂತಹ ವಿಭಿನ್ನತೆ. ಇಂತಹದ್ದೊಂದು ಸುಂದರ ತೇರು ಸಿದ್ದವಾಗಿರೋದು ಕೊಪ್ಪಳದಲ್ಲಿ. ಅಂದಾಗೆ ಈ ತೇರನ್ನ ಸಿದ್ದಪಡಿಸಿದ್ದು ಯಾರು ಅಂತ ಗೊತ್ತಾದ್ರೆ ನೀವು ಅರೆಕ್ಷಣ ಶಾಕ್ ಆಗ್ತೀರಾ. ಹೌದು, ಇದು ಪೂರ್ಣ ಅಂಧತ್ವವನ್ನ ಪಡೆದು ವಿಧಿಯ ಕ್ರೂರ ಆಟಕ್ಕೆ ಸವಾಲೆಸೆದ ಸಹೋದರರಿಬ್ಬರ ಸಾಧನೆ.
ಸಾಧನೆಗೆ ಯಾವುದೂ ಅಡ್ಡಿಯಿಲ್ಲ ಎಂದು ಯೋಚಿಸಿದರೆ ಇರೋದೂ ಇರಲ್ಲ. ಆದರೆ ಇದೆ ಎಂದು ಧನಾತ್ಮಕವಾಗಿ ಯೋಚಿಸಿದರೆ ಇಲ್ಲದಿರುವುದೂ ಬರುತ್ತೆ ಎಂಬುದಕ್ಕೆ ತಾಜಾ ತಾಜಾ ಉದಾಹರಣೆ ಈ ಸುಂದರ ತೇರು. ಅಂದಾಗೆ ಈ ಸಹೋದರರ ಹೆಸರು ಸುರೇಶ್ ಬಡಿಗೇರ ಹಾಗು ಮಹೇಶ್ ಬಡಿಗೇರ. ಇದು ಈ ಇಬ್ಬರು ಒಡಹುಟ್ಟಿದ ಅಂಧ ಸಹೋದರರ ಸ್ಫೂರ್ತಿಗಾಥೆ.
ತಮ್ಮ ಅಂಧತ್ವವನ್ನು ಮೆಟ್ಟಿ ನಿಂತು ಜಗತ್ತೇ ಕೊಂಡಾಡುವಂತ ಸಾಧನೆಯನ್ನು ಕೊಪ್ಪಳದ ಪ್ರತಿಭಾನ್ವಿತ ಸಹೋದರರ ಜೋಡಿ ಮಾಡಿ ತೋರಿಸಿದೆ. ಜೀವನಕ್ಕೆ ಮುಳುವಾಗಬಹುದಾಗಿದ್ದ ಕತ್ತಲೆಯನ್ನು ಮೆಟ್ಟಿ ನಿಂತು ಈ ಸಹೋದರರು ಸುಂದರವಾದ ತೇರನ್ನು ಸಿದ್ದಪಡಿಸಿದ್ದಾರೆ. ಇವರ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಸುರೇಶ ಬಡಿಗೆರ ಹಾಗೂ ಮಹೇಶ್ ಬಡಿಗೇರ ಸಹೋದರರು ಮೊದಲು ಎಲ್ಲರಂತೆಯೇ ಇದ್ದರು. ಓದಿನಲ್ಲಿ ಆಸಕ್ತಿ ಇತ್ತು. ಪಿಯೂಸಿವರೆಗೂ ಓದಿದರು. ಕಾರಣ ಇಬ್ಬರಿಗೂ ಅಂಧತ್ವ ಆವರಿಸಿ ಪರೀಕ್ಷೆ ಬರೆಯಲು ಆಗಲಿಲ್ಲ. ಮೊದಲು ಇರಳುಗಣ್ಣು ಇತ್ತು. ಅದೇ ಆನಂತರ ಅವರಿಗೆ ಬರಬರುತ್ತಾ ಇಡೀ ದಿನ ಕತ್ತಲು ಆವರಿಸಿತ್ತು.
ಮಲ್ಲಪ್ಪ ಮಳೆಯಪ್ಪ ಬಡಿಗೇರ ಅವರ ಸುಪುತ್ರರು
ಸದ್ಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪಟ್ಟಲಚಿಂತಿಯಲ್ಲಿರುವ ಸುರೇಶ ಹಾಗು ಮಹೇಶ ಬಡಿಗೆರ ಮೂಲತಃ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬೇಲೂರು ಗ್ರಾಮದವರು. ಅವರಿಗೆ ಎರಡು ಕಣ್ಣು ಕಾಣದೆ ಅಂಧರಾಗಿರುವ ಇವರು ಶಿಲ್ಪಕಲೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಮಲ್ಲಪ್ಪ ಮಳೆಯಪ್ಪ ಬಡಿಗೇರ ಅವರ ಸುಪುತ್ರರು.
ತಂದೆಯ ಗರಡಿಯಲ್ಲಿ ಶ್ರೀಶೈಲ, ಯಡಿಯೂರ, ಬೇಲೂರು ಹೀಗೆ 35 ಕ್ಕೂ ಹೆಚ್ಚು ಸುಪ್ರಸಿದ್ಧ ಕ್ಷೇತ್ರಗಳಲ್ಲಿ ರಥ ತಯಾರಿಸುವಲ್ಲಿ ಅನುಭವ ಪಡೆದಿದ್ದಾರೆ. ಮಲ್ಲಪ್ಪನವರು ತೇರುಗಳನ್ನು ತಯಾರಿಸುವ ಕಲೆಯನ್ನು ವಂಶಪಾರಂಪರ್ಯವಾಗಿ ರೂಢಿಸಿಕೊಂಡು ಬಂದಿದ್ದಾರೆ. ಅವರೊಂದಿಗೆ ಅವರ ಮಕ್ಕಳಾದ ಸುರೇಶ ಹಾಗು ಮಹೇಶ ಸಹ ಮುಂದುವರಿಸಿದ್ದಾರೆ.
ಮುಂದೇನು ಎಂಬ ಚಿಂತೆಯನ್ನೇ ಚಿತೆಗಿಟ್ಟರು!
ಮಲ್ಲಪ್ಪನವರ ಮಕ್ಕಳಾದ ಸುರೇಶ ಹಾಗು ಮಹೇಶ್ ರಿಗೆ ಬಾಲ್ಯದಿಂದಲೂ ಇರುಳುಕಣ್ಣಿನ ಸಮಸ್ಯೆ ಇತ್ತು. ಸಂಜೆಯಾಗುತ್ತಲೆ ಅವರಿಗೆ ಕತ್ತಲೆಯೊಂದಿಗೆ ಎಲ್ಲವೂ ಕತ್ತಲೆಯಾಗುತ್ತಿತ್ತು. ತಂದೆಯೊಂದಿಗೆ ರಥ ತಯಾರಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಪಿಯೂಸಿಯವರೆಗೂ ಓದಿದ ಅವರು ಮುಂದೆ ಓದುವ ಆಸೆ ಇತ್ತು. ಆದರೆ ಅವರಿಗೆ ರಾತ್ರಿ ಅಂಧತ್ವದಿಂದ ಇಡೀ ದಿನ ಅಂಧತ್ವ ಆವರಿಸಿತು. ಕಣ್ಣುಗಳು ಕಾಣದಾದವು.
ವೈದ್ಯರನ್ನು ಸಂಪರ್ಕಿಸಿದಾಗ ನರಗಳ ದೌರ್ಬಲ್ಯದಿಂದ ಅಂಧತ್ವ ಆವರಿಸಿದೆ. ಹೀಗಾಗಿ ಮುಂದೆ ನಿಮಗೆ ಕಣ್ಣುಗಳಿಂದ ಏನು ನೋಡಲು ಅಸಾಧ್ಯವೆಂದು ಹೇಳಿದರು. ಆಗ ಮುಂದೇನು ಎಂಬ ಚಿಂತೆ ಕಾಡತೊಡಗಿತ್ತು. ದುರಂತ ಏನಪ್ಪ ಅಂದ್ರೆ ಈ ಇಬ್ಬರು ಸಹೋದರರು ಎದೆಗುಂದಲಿಲ್ಲ. ಅಂಧತ್ವದ ನಡುವೆಯೂ ತಂದೆಯಿಂದ ಕಲಿತ ರಥ ತಯಾರಿಕೆಯನ್ನು ಮುಂದುವರಿಸಿದರು. ಗುರುವಾಗಿದ್ದ ತಂದೆ ಕಳೆದ ಒಂದೂವರೆ ವರ್ಷದ ಹಿಂದೆ ತೀರಿಕೊಂಡರು. ಇದು ಅವರ ಬದುಕಿಗೆ ಬಿದ್ದ ದೊಡ್ಡ ಪೆಟ್ಟು.
ಆದರೂ ಸಹೋದರರು ದೃತಿಗೆಡಲಿಲ್ಲ. ತಂದೆ ಮಲ್ಲಪ್ಪ ತೀರಿ ಹೋಗುವ ಮುನ್ನ ಪಟ್ಟಲಚಿಂತಿಯಲ್ಲಿನ ಶ್ರೀ ಆಂಜನೇಯ ದೇವರಿಗೆ 29 ಅಡಿ ಎತ್ತರದ ತೇರು ತಯಾರಿಸಿ ಕೊಡುವುದಾಗಿ ಒಪ್ಪಿಕೊಂಡಿದ್ದರು. ತೇರು ಸಿದ್ದವಾಗಲೇ ಬೇಕಿತ್ತು. ಇತ್ತ ಗ್ರಾಮಸ್ಥರು ಕೂಡ ರಥ ತಯಾರಿಸಿಕೊಡುವಂತೆ ಮನವಿ ಮಾಡಿದರು. ತಂದೆ ಕಾಲವಾದ ನಂತರ ತೇರು ತಯಾರಿಕೆ ಹೇಗೆ ಎಂಬ ಚಿಂತೆ ಇತ್ತು
ರಥ ತಯಾರಿಸಲು ಒಪ್ಪಿಕೊಂಡ ಇಬ್ಬರು ಸಹೋದರರು ಕಳೆದ ಒಂದು ವರ್ಷದಿಂದ ತೇರು ತಯಾರಿಕೆಯಲ್ಲಿ ತೊಡಗಿಕೊಂಡಿದ್ದರು. ಈಗ ರಥವು ಸಿದ್ದವಾಗಿ ಇದೇ ತಿಂಗಳು 16ರಂದು ಲೋಕಾರ್ಪಣೆಯಾಗಿದೆ. ತಂದೆ ನಂತರ ಸ್ವಯಂ ಸಾಮರ್ಥ್ಯದಿಂದ ತಯಾರಿಸಿದ ರಥ ಇದಾಗಿದೆ. ಸಂಪೂರ್ಣವಾಗಿ ಎರಡು ಕಣ್ಣು ಕಾಣದಿರುವ ಇವರು ಯಾವುದೇ ಯಂತ್ರೋಪಕರಣವಿಲ್ಲದೆ ಬೆರಳು ಸ್ಪರ್ಶದಿಂದ ಅದ್ಭುತ ಮೂರ್ತಿಗಳನ್ನು ಕೆತ್ತಿದ್ದಾರೆ.
ಇಂದು ಅವರು ಮಾಡಿರುವ ರಥವನ್ನು ಪ್ರತ್ಯಕ್ಷ ಕಂಡು ಒಂದು ಕ್ಷಣ ಹೆಮ್ಮೆ ಪಡುವಂತಾಗುತ್ತದೆ. ತೇರಿನಲ್ಲಿ ಸುಂದರವಾದ ಮೂರ್ತಿಗಳು, ಕುಸುರಿ ಕಲೆಯು ಎಲ್ಲರ ಗಮನ ಸೆಳೆಯುತ್ತವೆ. ಅವರು ಕೇವಲ ಸ್ಪರ್ಶಜ್ಞಾನದಿಂದ ರಥವನ್ನು ತಯಾರಿಸಿ ಎಲ್ಲರ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಇದಲ್ವಾ ಛಲ ಅಂದ್ರೆ.
ಅಂಧ ಕಲಾವಿದರಿಗೆ ಹೆಮ್ಮೆಯ ಸೆಲ್ಯೂಟ್
ಎಲ್ಲಾ ರೀತಿಯಲ್ಲೂ ಅನುಕೂಲ, ಆರೋಗ್ಯ ಇದ್ದೂ ಕೆಲಸವಿಲ್ಲವೆಂದು ಸೊಂಭೇರಿಗಳಾಗಿ ತಿರುಗುವ ಜನರ ಮಧ್ಯೆ ಇಂತಹ ಅಪರೂಪದ ಮಾಣಿಕ್ಯಗಳು ಇರುವುದು ಬಹಳ ವಿರಳ. ಕಣ್ಣು ಕಾಣದ ಇವರು ತಂದೆ ಕಲಿಸಿಕೊಟ್ಟ ವಿದ್ಯೆಯನ್ನು ಛಲ ಬಿಡದೇ ಸದುಪಯೋಗ ಮಾಡಿಕೊಂಡು ದೊಡ್ಡ ಸಂಸಾರದ ಬಂಡಿಯನ್ನು ಸಾಗಿಸುತ್ತಿರುವ ಇವರಿಗೆ ಎಷ್ಟು ಸೆಲ್ಯೂಟ್ ಹೊಡೆದರು ಕಡಿಮೆನೇ ಎಂದು ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮನುಷ್ಯ ತನ್ನ ಸಮಸ್ಯೆಗಳನ್ನೂ ಮೀರಿ ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಸುರೇಶ್ ಮತ್ತು ಮಹೇಶ್ ಸಹೋದರರೇ ಸಾಕ್ಷಿ. ಏನಂತ್ತೀರಾ..?
ತಂದೆ ಕಲಿಸಿಕೊಟ್ಟ ವಿದ್ಯೆಯನ್ನು ಛಲ ಬಿಡದೇ ಸದುಪಯೋಗ ಮಾಡಿಕೊಂಡು ದೊಡ್ಡ ಸಂಸಾರದ ಬಂಡಿಯನ್ನು ಸಾಗಿಸುತ್ತಿರುವ ಇವರಿಗೆ ನಮ್ಮ ಅಭಿನಂದನೆ.
ದಯಮಾಡಿ ಇವರ ಕೌಶಲ್ಯಕ್ಕೆ ನೀವು ಗೌರವ ಕೊಡುವುದಾದರೆ ನಿಮ್ಮ ಸುತ್ತ-ಮುತ್ತಲಿನ ಗ್ರಾಮದಲ್ಲಿ ರಥ ಮಾಡಿಸುವುದಿದ್ದರೆ ಇವರಿಗೆ ಅವಕಾಶ ಕೊಡಿಸಿ.
ಸುರೇಶ ಬಡಿಗೇರ - 81479 01809
ಮಹೇಶ ಬಡಿಗೇರ - 96113 74828
-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, 24x7 ಲೈವ್ ಕನ್ನಡ