DISTRICT:
ಶಿವಮೊಗ್ಗ: 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬಿಜೆಪಿ ಕಚೇರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು ಬಿಜೆಪಿ ನಾಯಕರು ಆಹ್ವಾನಿಸದಿರುವುದು ಯಡಿಯೂರಪ್ಪನವರ ಅಸಮಾಧಾನ, ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದೆ.
ಇದು ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಕ್ಕೂ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಾಳೆ ಬಿಜೆಪಿ ಕಚೇರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸಲಿದ್ದಾರೆ. ಆದರೂ ಕೂಡ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಈವರೆಗೂ ಆಹ್ವಾನ ನೀಡಿಲ್ಲ. ಯಡಿಯೂರಪ್ಪನವರನ್ನು ರಾಜ್ಯ ಬಿಜೆಪಿ ನಾಯಕರು ಕಡೆಗಣಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತ ಹೆಚ್ಚುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಎಲ್ಲಾ ಪಕ್ಷದಲ್ಲಿಯೂ ಭಿನ್ನಮತವಿದೆ. ರಾಜಕೀಯದಲ್ಲಿ ಭಿನ್ನಮತ, ಭಿನ್ನಾಭಿಪ್ರಾಯಗಳಿರುವುದು ಸಹಜ ಎಂದು ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಭಿನ್ನಮತ ಎಲ್ಲ ಪಕ್ಷದಲ್ಲಿಯೂ ಇದೆ, ಬಿಜೆಪಿಯಲ್ಲಿಯೂ ಭಿನ್ನಮತವಿದೆ. ಈಗ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತವಿಲ್ಲವೇ? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿದೆ. ಪ್ರತ್ಯೇಕ ಬಸ್ ಯಾತ್ರೆಯನ್ನೇ ಮಾಡಲು ಹೊರಟಿದ್ದಾರೆ. ಹಾಗಾಗಿ ಎಲ್ಲಾ ಪಕ್ಷಗಳಲ್ಲಿಯೂ ಭಿನ್ನಮತ ಇರುವುದು ಸಹಜ ಎಂದು ಹೇಳಿದ್ದಾರೆ.
ಈ ಮೂಲಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಸಮಾಧಾನವನ್ನು ಈಶ್ವರಪ್ಪ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರಾ? ಎಂಬ ಕುತೂಹಲ ಮೂಡಿದೆ.