DISTRICT: ಕಾರವಾರ : ಭಟ್ಕಳ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಸವಿತಾ ಕಾಮತ್ ವಿಕೆಂಡ್ ಲಾಕ್ ಡೌನ್ ಇದ್ದರೂ ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಸರಕಾರಿ ಕಛೇರಿಯಲ್ಲಿಯೇ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ನಮ್ಮ ದೇಶದಲ್ಲಿ ಕಾನೂನುಗಳೇನಿದ್ದರೂ ಬಡವರಿಗೆ ಮತ್ತು ಅಮಾಯಕರಿಗೆ ಮಾತ್ರ ಅನ್ವಯಿಸುತ್ತದೆ. ಈ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಸಮಾಜದ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನ್ವಯಿಸುವುದಿಲ್ಲ.ಯಾವುದಾದರೂ ಬಡ ಜನರು ಸಾಮಾನ್ಯ ಕಾನೂನಿನ ಅರಿವಿಲ್ಲದೆ ಏನಾದರೂ ಹೆಚ್ಚು ಕಡಿಮೆ ಮಾಡಿದರೆ ಅವನನ್ನು ಅಪರಾಧಿಯನ್ನಾಗಿಸಿ ಬಂಧಿಸಿ ಆತನ ಮೇಲೆ ದಬ್ಬಾಳಿಕೆಯನ್ನು ನಡೆಸಲಾಗುತ್ತದೆ. ಆದರೆ ಅದೇ ಸಮಾಜದಲ್ಲಿ ಪ್ರತಿಷ್ಠಿತರೆನಿಸಿಕೊಂಡವರು, ರಾಜಕಾರಣಿಗಳು,ಅಧಿಕಾರಿಗಳು,ಕಾನೂನಿನ ಉಲ್ಲಂಘನೆ ಮಾಡಿದರೆ ನಮ್ಮ ದೇಶದ ಕಾನೂನಿನ ಕಣ್ಣಿಗೆ ಮಣ್ಣೆರಚಿ ಅಂತವರನ್ನು ರಕ್ಷಿಸುವ ಪ್ರಯತ್ನ ನಡೆಸಲಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ತಾಲೂಕಿನಲ್ಲಿ ಕೋವಿಡ್ ಜಾಗೃತಿ ಮೂಡಿಸಬೇಕಾದ, ಕಾನೂನಿನ ಅರಿವಿರುವ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪರಿ. ಶನಿವಾರ ಮತ್ತು ರವಿವಾರ ರಾಜ್ಯಾದ್ಯಂತ ವೀಕೆಂಡ್ ಕರ್ಪ್ಯೂ ವಿಧಿಸಲಾಗಿದೆ. ಸಾರ್ವಜನಿಕರು ಬಿದಿಗಿಳಿಯುವಂತಿಲ್ಲ. ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವೀಕೆಂಡ್ ಕರ್ಪ್ಯೂವನ್ನು ಎಲ್ಲರೂ ಕಟ್ಟುನಿಟ್ಟಿನಿಂದ ಪಾಲಿಸಬೇಕು.ಪಾಲಿಸದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಆದೇಶ ನೀಡಿದೆ. ಆದರೆ ಒಬ್ಬ ಜವಾಬ್ದಾರಿಯುತ, ತಾಲೂಕಿನಲ್ಲಿ ಕೊರೋನಾ ನಿಯಂತ್ರಣದಲ್ಲಿ ಮಹತ್ವಪೂರ್ಣ ಪಾತ್ರವಹಿಸಬೇಕಾದ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಸವಿತಾ ಕಾಮತ್ ಮಾತ್ರ ತನಗೂ ಈ ಸರಕಾರದ ವೀಕೆಂಡ್ ಕರ್ಪ್ಯೂಗೂ ಯಾವುದೇ ಸಂಬಂಧವೇ ಇಲ್ಲವೇನೋ ಎಂಬಂತೆ ತಾಲೂಕು ಆಸ್ಪತ್ರೆಯಲ್ಲಿ ಸಾರ್ವಜನಿಕರ ಜೀವವನ್ನು ಅಪಾಯಕ್ಕೆ ಸಿಲುಕಿಸಿ ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದಾರೆ. ಬಡ ಅಮಾಯಕರಿಗೆ ಮಾಸ್ಕ್ ಹಾಕಲಿಲ್ಲ, ಸಾಮಾಜಿಕ ಅಂತರ ಪಾಲಿಸಲಿಲ್ಲ ಎಂಬ ನೆಪ ಮುಂದಿಟ್ಟುಕೊಂಡು ಮಹಾ ಅಪರಾಧ ಎಸಗಿದಂತೆ ಆತನ ಮೇಲೆ ದಬ್ಬಾಳಿಕೆ ನಡೆಸಲಾಗುತ್ತದೆ. ಆದರೆ ಈಗ ಜವಾಬ್ದಾರಿಯುತ ಕಾನೂನಿನ ಅರಿವಿದ್ದ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಸವಿತಾ ಕಾಮತ್ ಕೊರೋನಾ ನಿಯಮಾವಳಿ ಗಾಳಿಗೆ ತೂರಿದಾಗ ಈ ಅಧಿಕಾರಿಗಳು ನಿದ್ರೆಗೆ ಜಾರಿರುತ್ತಾರೋ ಎಂಬ ಅನುಮಾನ ಮೂಡುವುದು ಸುಳ್ಳಲ್ಲ. ಹುಟ್ಟುಹಬ್ಬದ ಹೆಸರಲ್ಲಿ ಕೋವಿಡ್ ನಿಯಮಾವಳಿ ಗಾಳಿಗೆ ತೂರಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ಇವರು ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ನಾಗರಿಕ ಸೇವಾ ನಿಯಮಾವಳಿಯನ್ನೆ ಗಾಳಿಗೆ ತೂರಿದ್ದಾರೆ. ಸರಕಾರಿ ಕಛೇರಿಗಳಲ್ಲಿ, ಆಸ್ಪತ್ರೆಗಳಲ್ಲಿ ಹುಟ್ಟುಹಬ್ಬ ಹಾಗೂ ಇತರ ಖಾಸಗಿ ಕಾರ್ಯಕ್ರಮವನ್ನು ಆಚರಿಸುವುದು ನಾಗರಿಕ ಸೇವಾ ನಿಯಮಾವಳಿಗೆ ವಿರುದ್ದವಾಗಿದೆ.ಹೀಗೆ ಮಾಡುವುದು ಕಾನೂನು ಬಾಹಿರ ಎಂಬ ಅಂಶ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.ಈ ವಿಚಾರ ತಿಳಿದಿದ್ದೂ ಕೂಡ ಜವಾಬ್ದಾರಿಯುತ ಅಧಿಕಾರಿಯಾಗಿ ತಾಲೂಕು ಆಸ್ಪತ್ರೆಯ ತಮ್ಮ ಸರಕಾರಿ ಛೇಂಬರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅನಿವಾರ್ಯತೆ ಈ ಅಧಿಕಾರಿಗೆ ಏನಿತ್ತು ? ತಮಗೆ ಇಲ್ಲಿ ಯಾರೂ ಏನೂ ಹೇಳುವಂತಿಲ್ಲ. ತಾವು ನಡೆಸಿದ್ದೆ ರಾಜ್ಯಭಾರ ಎಂಬ ಮನೋಭಾವನೆ ಈ ಅಧಿಕಾರಿಯಲ್ಲಿ ಮನೆ ಮಾಡಿದೆಯಾ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ತಾಲೂಕಿನಲ್ಲಿ ಅಮಾಯಕರಿಗೆ ಕಾನೂನಿನ ಪಾಠವನ್ನು ಮಾಡುವ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಈಗ ತಮ್ಮದೇ ಇಲಾಖೆಯ ಅಧಿಕಾರಿ ಕಾನೂನಿನ ಅರಿವಿದ್ದರೂ ಕೂಡಾ ಕಾನೂನನ್ನು ಗಾಳಿಗೆ ತೂರಿರುವುದು ಇವರಿಗೆ ಕಾಣಿಸುವುದೇ ಇಲ್ವಾ ? ಈ ಜಿಲ್ಲಾಡಳಿತ ಕೇವಲ ಕಾನೂನನ್ನು ಬಡ ಅಮಾಯಕರಿಗೆ ಮಾತ್ರ ಸಿಮಿತವನ್ನಾಗಿಸಿದೆಯಾ ? ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮನೆ ಮಾಡಿದೆ. ಕಾರಣ ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂಬುದು ತಾಲೂಕಿನ ಪ್ರಜ್ಞಾವಂತ ನಾಗರಿಕರ ಕಳಕಳಿಯಾಗಿದೆ.