DISTRICT: ಕಾರವಾರ : ರಸ್ತೆ ಸಂಪರ್ಕ ಇಲ್ಲದ ಕಾರಣ ಅನಾರೋಗ್ಯ ಕ್ಕೊಳಗಾದ ವೃದ್ಧೆಯೋರ್ವ ರನ್ನು ಕುರ್ಚಿಯ ಜೋಲಿಯಲ್ಲಿ ಸುಮಾರು 5 ಕಿ.ಮೀ.ಕಡಿದಾದ ದಾರಿಯಲ್ಲಿ ಹೊತ್ತು ತಂದು ಆಸ್ಪತ್ರೆ ಸೇರಿಸಿರುವ ಘಟನೆ ಕಾರವಾರದ ಮಚ್ಚಳ್ಳಿಯಲ್ಲಿ ನಡೆದಿದೆ. ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ದಟ್ಟಾರಣ್ಯದ ಮಧ್ಯ ಭಾಗದಲ್ಲಿರುವ ಮಚ್ಚಳ್ಳಿ ಗ್ರಾಮದ ನೇಮಿಗೌಡ ಅನಾರೋಗ್ಯಕ್ಕೊಳಗಾಗಿದ್ದಾರೆ. ರಸ್ತೆ ಸಂಪರ್ಕ ಇಲ್ಲದ ಕಾರಣ ಗ್ರಾಮಕ್ಕೆ ಯಾವುದೇ ಆಂಬ್ಯುಲೆನ್ಸ್ ಅಥವಾ ಇತರೆ ವಾಹನ ಬರಲು ಸಾಧ್ಯವಿರಲಿಲ್ಲ. ಹೀಗಾಗಿ ಗ್ರಾಮದ ಯುವಕರೇ ಸೇರಿ ಪ್ಲಾಸ್ಟಿಕ್ ಕುರ್ಚಿಯೊಂದನ್ನು ಕೋಲಿಗೆ ಬಳ್ಳಿಯ ಸಹಾಯದಿಂದ ತೊಟ್ಟಿಲಿನ ರೀತಿಯಲ್ಲಿ ಕಟ್ಟಿಕೊಂಡು ಅದರಲ್ಲಿ ಮಹಿಳೆಯನ್ನು ಕೂರಿಸಿ,ಹೆಗಲ ಮೇಲೆ ಹೊತ್ತು ಅಮದಳ್ಳಿ ಗ್ರಾಮವನ್ನು ತಲುಪಿ,ಬಳಿಕ ಅಲ್ಲಿಂದ ವಾಹನದ ಮೂಲಕ ಆಸ್ಪತ್ರೆ ತಲುಪಿದ್ದಾರೆ.ಸದ್ಯ ವೃದ್ಧೆಗೆ ಚಿಕಿತ್ಸೆ ಲಭಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಪ್ರತಿ ಬಾರಿಯೂ ಇದೇ ಸಮಸ್ಯೆ ಗ್ರಾಮದಲ್ಲಿ ಯಾರೇ ಅನಾರೋಗ್ಯಕ್ಕೆ ಒಳಗಾದರೂ ಇದೇ ರೀತಿ ತರಬೇಕಾದ ದು:ಸ್ಥಿತಿ ಇಲ್ಲಿದೆ.ಕಾಲು ದಾರಿಯಲ್ಲಿ ಸುಮಾರು 1 ಗಂಟೆಗೂ ಅಧಿಕ ಸಮಯ ತಗಲುತ್ತದೆ.ಒಂದು ವೇಳೆ ತುರ್ತು ಪರಿಸ್ಥಿತಿಯಾಗಿದ್ದರೆ ಹೆಚ್ಚಿನ ಅನಾಹುತವೇ ಸಂಭವಿಸುವ ಸಾಧ್ಯತೆ ಇದೆ. ಇದು ಹಲವು ದಶಕಗಳಿಂದ ಇರುವ ಸಮಸ್ಯೆಯಾಗಿದೆ. ಇದುವರೆಗೂ ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಆಗಿಲ್ಲ.ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.ತಮ್ಮ ಗ್ರಾಮಕ್ಕೆ ರಸ್ತೆಯೊಂದನ್ನು ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಹಲವಾರು ವರ್ಷಗಳಿಂದ ಮನವಿ ನೀಡುತ್ತಾ ಬಂದರೂ ಇದುವರೆಗೂ ಪ್ರಯೋಜನ ವಾಗಿಲ್ಲ.ಮುಂದಿನ ದಿನಗಳ ಲ್ಲಾದರೂ ಈ ಬಗ್ಗೆ ಸರ್ಕಾರ ಗಮನ ಹರಿಸಿ ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.