DISTRICT: ಕಾರವಾರ : ಕುಮಟಾ ಪಟ್ಟಣದ ಹೆಡ್ ಬಂದರ್‌ನ ಸಮುದ್ರಕ್ಕೆ ಹೊಂದಿಕೊಂಡಿರುವ ಬಂಡೆಗಲ್ಲಿನ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ಯುವಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಮುದ್ರ ಪಾಲಾಗಿದ್ದಾನೆ. ಕುಮಟಾ ಪಟ್ಟಣದ ಹೆಡ್ ಬಂದರ್‌ನ ಸಮುದ್ರ ತೀರಕ್ಕೆ ಸ್ಕೂಟರ್‌ನಲ್ಲಿ (ಕೆಎ-03 ಎಚ್.ಎಲ್ - 6353) ಬಂದ ಯುವಕನೋರ್ವ ಸಮುದ್ರಕ್ಕೆ ಹೊಂದಿಕೊಂಡಿರುವ ಬಂಡೆಗಲ್ಲಿನ ಮೇಲೆ ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುತ್ತಿದ್ದ.ಈ ಸಂದರ್ಭದಲ್ಲಿ ಕಾಲು ಜಾರಿದ ಪರಿಣಾಮ ಯುವಕ ಸಮುದ್ರ ಪಾಲಾಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕುಮಟಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ರವಿ ಗುಡ್ಡಿ ನೇತೃತ್ವದ ತಂಡ ಸ್ಥಳೀಯರ ಸಹಕಾರದಲ್ಲಿ ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.ಆದರೆ ಸಮುದ್ರ ಪಾಲಾದ ಯುವಕ ಈತನಕ ಪತ್ತೆಯಾಗಿಲ್ಲ. ಅಗ್ನಿ ಶಾಮಕ ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿಯವರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಯುವಕನ ಸ್ಕೂಟರ್‌ನ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ,ಈ ಸ್ಕೂಟರ್ ಬೆಂಗಳೂರಿನ ಯುವತಿಯ ಹೆಸರಿನಲ್ಲಿರುವುದು ಕಂಡುಬಂದಿದೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.